ಚನ್ನಮ್ಮನ ಕಿತ್ತೂರು ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಡ್ರಗ್ಸ್ ವ್ಯಸನಮುಕ್ತ ಜಾಗೃತಿ ಕಾರ್ಯಕ್ರಮದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ, ಶಿವಾನಂದ ಗುಡಗನಟ್ಟಿ, ಡಾ.ಬಸವರಾಜ ಹೊಸಮನಿ ಇತರರಿದ್ದರು.
ಚನ್ನಮ್ಮನ ಕಿತ್ತೂರು: ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿದ್ದು, ಆರೋಗ್ಯಕರ ಹಾಗೂ ಶಿಸ್ತುಬದ್ಧ ಜೀವನ ರೂಪಿಸಿಕೊಳ್ಳಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಕಿತ್ತೂರು ಪೊಲೀಸ್ ಠಾಣೆ ಮತ್ತು ಸರ್ಕಾರಿ ಪ್ರಥಮ ದರ್ಜೆಯ ಕಾಲೇಜು ವತಿಯಿಂದ ಸೋಮವಾರ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಡ್ರಗ್ಸ್ ವ್ಯಸನಮುಕ್ತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿರುವುದು ಸಮಾಜದಲ್ಲಿ ಆತಂಕ ಸೃಷ್ಟಿಸಿದೆ. ಅವರನ್ನು ಎಚ್ಚರಗೊಳಿಸಲು ಸರ್ಕಾರ ಡ್ರಗ್ಸ್‌ಮುಕ್ತ ಸಾಕಷ್ಟು ಕಾರ್ಯಕ್ರಮ ಮಾಡುತ್ತಿದೆ. ಮಾದಕ ವ್ಯಸನ ಮುಕ್ತ, ಸುರಕ್ಷಿತ ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಸಿಪಿಐ ಶಿವಾನಂದ ಗುಡಗನಟ್ಟಿ ಮಾತನಾಡಿ, ಮಾದಕ ವಸ್ತು ವ್ಯಸನವು ಮಾನವನ ಬದುಕಷ್ಟೇ ಅಲ್ಲದೇ, ಸಮಾಜದ ಭವಿಷ್ಯಕ್ಕೂ ಮಾರಕವಾಗಿದೆ. ವಿದ್ಯಾರ್ಥಿಗಳು ವ್ಯಸನಗಳಿಗೆ ದಾಸರಾಗದೇ ಸಾಧನೆಯತ್ತ ಗಮನ ಹರಿಸಲು ಕರೆ ನೀಡಿದರು.
ಪ್ರಾಚಾರ್ಯ ಡಾ.ಬಸವರಾಜ ಹೊಸಮನಿ, ಪಿಎಸ್‌ಐ ಜಿಜಿ ಹಂಪಣ್ಣವರ, ಮಂಜು ದೊಡ್ಡನವರ್, ಅಸ್ಪಾಕ್ ಹವಾಲ್ದಾರ್, ಮಹೇಶ ಶೆಟ್ಟರ, ಸುರೇಶ ಕಿತ್ತೂರ, ಯಲ್ಲಪ್ಪ ಕಡಕೋಳ ಇತರರಿದ್ದರು.