ಬೆಳಗಾವಿ: ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲೇ ದೇಶದ ಭವಿಷ್ಯವಿದೆ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ವೈದ್ಯಕೀಯ ನಿರೀಕ್ಷಕ ಡಾ. ಸಂಜಯ ಕಂಬಾರ ಹೇಳಿದರು.
ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಪೋಲಿಯೋ ರೋಗಮಕ್ಕಳ ಬಾಲ್ಯ ಹಾಗೂ ಭವಿಷ್ಯದ ಮೇಲೆ ಅಗಾಧ ಪರಿಣಾಮ ಬೀರುತ್ತದೆ.
ಹೀಗಾಗಿ, ಭಾರತವನ್ನು ಪೋಲಿಯೋ ಮುಕ್ತವನ್ನಾಗಿಸಲು 1994ರಲ್ಲಿ ಪ್ರಾರಂಭಿಸಲಾದ ಈ ಲಸಿಕಾ ಅಭಿಯಾನದಿಂದ ದೇಶದಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿದೆ. ಆದ್ದರಿಂದ ಮಕ್ಕಳು ಭವಿಷ್ಯದಲ್ಲಿ ಕಷ್ಟಕ್ಕೊಳಗಾಗದಂತೆ ಮಾಡಲು 5 ವರ್ಷದೊಳಗಿನವರಿಗೆ ಲಸಿಕೆ ಹಾಕಿಸಬೇಕು ಎಂದರು.
ಆಸ್ಪತ್ರೆ ಹಿರಿಯ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್.ಕಡ್ಡಿ ಮಾತನಾಡಿ, ಭಾರತದಲ್ಲಿ ಪೋಲಿಯೋ ನಿರ್ಮೂಲನೆಯಾಗಿದೆ. ಆದರೆ ಪಾಕಿಸ್ತಾನ, ಅಪಘಾ ನಿಸ್ತಾನ ಸೇರಿ ಅಕ್ಕಪಕ್ಕದ ದೇಶಗಳಲ್ಲಿ ಈ ಪ್ರಕರಣ ದಾಖಲಾಗುತ್ತಿವೆ. ಹೀಗಾಗಿ, ಇದು ನಮ್ಮ ದೇಶದ ಮಕ್ಕಳನ್ನು ಬಾಧಿಸದಂತೆ ಮುಂಜಾಗ್ರತೆ ವಹಿಸಲು ಲಸಿಕೆ ಹಾಕಿಸಲೇಬೇಕು ಎಂದರು. ಆಸ್ಪತ್ರೆ ಚಿಕ್ಕಮಕ್ಕಳ ವಿಭಾಗದ ಡಾ.ಸ್ನೇಹಲ್ ವೆರ್ಣೇಕರ, ಸಿಬ್ಬಂದಿ ಇದ್ದರು.