ಬೆಳಗಾವಿಯಲ್ಲಿ ಭಾನುವಾರ ಜರುಗಿದ ಕಾರ್ಗಿಲ್ ವಿಜಯ ದಿನದಲ್ಲಿ ಚನ್ನಬಸವ ದೇವರು ಮಾತನಾಡಿದರು. ರಾಹುಲ ಜಾರಕಿಹೊಳಿ, ಬಸಪ್ಪ ತಳವಾರ, ಡಾ.ಶಿವಣ್ಣ ಇತರರಿದ್ದರು.
ಬೆಳಗಾವಿ: ಜನ್ಮನೀಡಿದ ತಾಯಿ ಮತ್ತು ತಾಯ್ನಡಿನ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. ಆದರೆ ಗಡಿಕಾಯುವ ಯೋಧರಿಗೆ ಸಹಾಯ ಮಾಡಲಾಗದಿದ್ದರೂ ಗೌರವ ಸಲ್ಲಿಸುವ ಮೂಲಕ ತಾಯ್ನಡಿನ ಋಣದ ಭಾರ ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು ಎಂದು ಅವರೊಳ್ಳಿ-ಬಿಳಕಿ ರುದ್ರಸ್ವಾಮಿಮಠದ ಶ್ರೀ ಚನ್ನಬಸವ ದೇವರು ಹೇಳಿದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘವು ನಗರದ ಕೆಪಿಟಿಸಿಎಲ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 27ನೇ ಕಾರ್ಗಿಲ್ ವಿಜಯ ಸ್ಮರಣೆ ಹಾಗೂ ಹಾಗೂ ಅಪರೇಷನ್ ಸಿಂಧೂರ ಸಂಭ್ರಮಾಚರಣೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸೈನಿಕನ ಕಾರ್ಯ ಎಲ್ಲ ವೃತ್ತಿಗಳಿಗಿಂತ ಉನ್ನತ ಸ್ಥಾನದಲ್ಲಿದೆ. ತಮ್ಮ ಪ್ರಾಣ ಪಣಕ್ಕಿಟ್ಟು ಬಂಧು-ಬಳಗ, ಮಕ್ಕಳನ್ನೂ ಬಿಟ್ಟು ಕೊರೆಯುವ ಚಳಿ, ಸುಡುವ ಬಿಸಿಲು ಹಾಗೂ ಹಸಿವಿನ ಅರಿವೂ ಇಲ್ಲದೇ ಐದಾರು ದಿನಗಳವರೆಗೂ ಉಪವಾಸದಲ್ಲೇ ಗಡಿ ಕಾಯುತ್ತ ನಮ್ಮ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿರುತ್ತಾರೆ ಎಂದು ಶ್ಲಾಘಿಸಿದರು.
ಇವತ್ತು ನಾವು ಸಿನಿಮಾ ತೆರೆಯ ಮೇಲೆ ಬರುವವರನ್ನೆಲ್ಲ ಹಿರೋ ಎಂದು ನಂಬುತ್ತೇವೆ. ವಿಜೃಂಭಿಸುತ್ತೇವೆ. ಆದರೆ, ನಿಜವಾದ ಹಿರೋಗಳೆಂದರೆ ಅದು ಗಡಿ ಕಾಯುವ ಸೈನಿಕರು ಮಾತ್ರ. ನಮ್ಮೆಲ್ಲರ ಬದುಕಿಗೋಸ್ಕರ, ನಮ್ಮ ನೆಮ್ಮದಿಯ ಜೀವನಕ್ಕೋಸ್ಕರ ಅವರು ತಮ್ಮ ಬದುಕು, ಜೀವನವನ್ನೇ ಬದಿಗಿಟ್ಟು ಕಣ್ಣ ರೆಪ್ಪೆಯಂತೆ ದೇಶವನ್ನು ಕಾಯುತ್ತಿದ್ದಾರೆ ಎಂದರು.
ಸಮಾರಂಭದಲ್ಲಿ ಸಾಧಕ ಯೋಧರಿಗೆ ಜನರಲ್ ಕರಿಯಪ್ಪ ಪ್ರಶಸ್ತಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಮಾಜಿ ಯೋಧರಿಗೆ ಸೈನಿಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಕುಟುಂಬ ಸದಸ್ಯರು ಹಾಗೂ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ಸೈನಿಕರನ್ನು ಸನ್ಮಾನಿಸಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ ಜಾರಕಿಹೊಳಿ, ಡಿಸಿಪಿ ನಾರಾಯಣ ಬರಮನಿ, ಸಂಘದ ರಾಜ್ಯ ಅಧ್ಯಕ್ಷ ಡಾ.ಶಿವಣ್ಣ, ವಿಜಯಪುರ ಜಿಲ್ಲಾ ಅಧ್ಯಕ್ಷ ಆರ್.ಐ.ಹಿರೇಮಠ, ಬೆಳಗಾವಿ ಜಿಲ್ಲಾಧ್ಯಕ್ಷ ಬಸಪ್ಪ ತಳವಾರ, ನಾಗಪ್ಪ ಕಳಸಣ್ಣವರ, ವಿರೂಪಾಕ್ಷ ತಿಳಗಂಜಿ, ಅಡಿಕೆಪ್ಪ ಮನಗುತ್ತಿ, ಕೆಂಪಣ್ಣ ಲಕ್ಕನ್ನವರ, ಆಶಾರಾಣಿ ವನ್ನೂರ, ರೇಣುಕಾ ಪಾಟೀಲ, ರಾಜಶ್ರೀ ಪಾಟೀಲ, ಅಶ್ವಿನಿ ದೇಸಾಯಿ ಇತರರಿದ್ದರು.