ಹಣಮಂತ ಕಲಾದಗಿ 
ಬೆಳಗಾವಿ

ಪಾಲಿಕೆಯಿಂದ ಸ್ವಚ್ಛ ಸರ್ವೇಕ್ಷಣ ಅಭಿಯಾನ ಆರಂಭ

ಬೆಳಗಾವಿ : ಭಾರತ ಸರ್ಕಾರದ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ದಿಸೆಯಲ್ಲಿ ಆರಂಭಿಸಿರುವ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಈವರೆಗೆ 16 ಸಾವಿರ ಜನ ಪಾಲ್ಗೊಂಡಿದ್ದಾರೆ ಎಂದು ಪಾಲಿಕೆ ಪರಿಸರ ವಿಭಾಗದ ಕಾರ್ಯಪಾಲಕ ಅಭಿಯಂತರ ಹಣಮಂತ ಕಲಾದಗಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಗರವಾಸಿಗಳ ಅಭಿಪ್ರಾಯಕ್ಕನುಗುಣವಾಗಿ ಉತ್ತಮ ಪರಿಸರಪೂರಿತ ವಾತಾವರಣ ನಿರ್ಮಿಸುವುದೇ ಈ ಅಭಿಯಾನದ ಮೂಲ ಉದ್ದೇಶ. ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡುವ ನಗರ ಪಾಲಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಹುಮಾನ, ಸ್ಟಾರ್ ರ‌್ಯಾಂಕಿಂಗ್ ಕೊಡುವ ಸಂಪ್ರದಾಯವನ್ನು ಸರ್ಕಾರ ಹೊಂದಿದೆ. ಇಂತಹ ಉತ್ತಮ ಉದ್ದೇಶ ಹೊಂದಿರುವ ಅಭಿಯಾನವನ್ನು ಆಯುಕ್ತ ಕಾರ್ತಿಕ ಎಂ. ನಿರ್ದೇಶನದಂತೆ ಆರಂಭಿಸಲಾಗಿದೆ ಎಂದು ವಿವರಿಸಿದ್ದಾರೆ.
ಪಾಲಿಕೆಯ ಒಟ್ಟು ಜನಸಂಖ್ಯೆಯಲ್ಲಿ ಶೇ.5ರಷ್ಟು ಜನ ತಮ್ಮ ಅಭಿಪ್ರಾಯ ಮಂಡಿಸಿದಲ್ಲಿ ನಿಗದಿತ ಗುರಿ ಮುಟ್ಟಬಹುದು. ಕಸ, ಶೌಚಾಲಯ ನಿರ್ವಹಣೆ ಸೇರಿದಂತೆ ಒಟ್ಟು ಐದು ಪ್ರಶ್ನೆಗಳಿವೆ. ಆ್ಯಪ್‌ನಲ್ಲಿ ಅಥವಾ ಪಾಲಿಕೆಯಿಂದ ಅಭಿಯಾನದ ಪ್ರತಿನಿಧಿಗಳು ಸಹ ವಿವಿಧ ಸಂಸ್ಥೆ, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದು ಅವರಿಗೂ ಮಾಹಿತಿ ನೀಡಬಹುದು ಎಂದು ಹೇಳಿದ್ದಾರೆ.