ನಿಡಸೋಸಿ ಸ್ವಾಮೀಜಿ 
ಬೆಳಗಾವಿ

ಗ್ರಂಥ ಲೋಕಾರ್ಪಣೆ ನಾಡಿದ್ದು

ಪ್ರಶಾಂತ ಹೂಗಾರ
ಸಂಕೇಶ್ವರ: ನಿಡಸೋಸಿ ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದಿಂದ ಡಾ.ವಿ.ಎಸ್.ಮಾಳಿ ಸಂಪಾದಕತ್ವದ ‘ಇದು ಬರೀ ಬೆಳಗಲ್ಲೋ ಅಣ್ಣಾ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಮಾ.31ರಂದು ಬೆಳಗ್ಗೆ 10 ಗಂಟೆಗೆ ನಿಡಸೋಸಿ ಹಿರಾಶುಗರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಲಿದೆ ಎಂದು ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ನಿಡಸೋಸಿ ಜಗದ್ಗುರು ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಧ್ಯಾಹ್ನ ಡಾ.ಎಂ.ಬಿ.ಹೂಗಾರ ಅವರ ‘ಭವಕೆ ಬಂದ ಬೆಳಕು’ ಕೃತಿ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಪಂಚಮ ನಿಜಲಿಂಗೇಶ್ವರ ಗ್ರಂಥ ಮಾಲಿಕೆಯಿಂದ ಅನೇಕ ಶರಣರು ಹಾಗೂ ಸಾಧಕರ ಗ್ರಂಥಗಳನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ. ಸಿದ್ಧೇಶ್ವರ ಸ್ವಾಮೀಜಿ ಆದರ್ಶ ಜನರಿಗೆ ತಲುಪಿಸುವ ಉದ್ದೇಶದಿಂದ ಹೊರತಂದಿರುವ ಗ್ರಂಥವನ್ನು ಭಕ್ತರ ಭಕ್ತಿಯ ಜೋಳಿಗೆಗೆ ಅರ್ಪಿಸಲಾಗುವುದು ಎಂದು ತಿಳಿಸಿದರು.
ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಶ್ರೀಗಳು ಸಾನ್ನಿಧ್ಯ ಹಾಗೂ ಸದಲಗಾ ಗೀತಾಶ್ರಮದ ಡಾ.ಶ್ರದ್ಧಾನಂದ ಸ್ವಾಮೀಜಿ ಉಪಸ್ಥಿತರಿರುವರು. ರಾಣಿ ಚನ್ನಮ್ಮ ವಿವಿ ನಿವೃತ್ತ ಕುಲಸಚಿವ ಡಾ.ಶಾಂತಿನಾಥ ದಿಬ್ಬದ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಡಾ.ವಿ.ಎಸ್.ಮಾಳಿ, ಡಾ.ವೈ.ಎಂ.ಯಾಕೊಳ್ಳಿ, ಡಾ.ಆನಂದ ಜಕ್ಕಣ್ಣವರ, ಡಾ.ಎಂ.ಬಿ.ಹೂಗಾರ, ಡಾ.ಮಲ್ಲಿಕಾರ್ಜುನ ಮೇತ್ರಿ, ಡಾ.ಅಶೋಕ ನರೋಡೆ ಅವರು ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಸುಭಾಸ ಹೊಸಕಲ್ಲೆ ಹಾಗೂ ಹಿರಿಯ ಸಾಹಿತಿ ಡಾ.ಗುರುಪಾದ ಮರಗುದ್ದಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಪ್ರಾಚಾರ್ಯ ಡಾ.ಎಸ್.ಸಿ.ಕಮತೆ ಮಾತನಾಡಿದರು.