ಅಥಣಿ ಪಟ್ಟಣದ ಜೆ.ಎ. ಕಾಲೇಜ್ ಆವರಣದಲ್ಲಿ ವ್ಯಾಸಭಾರತ ಪ್ರವಚನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಮಾಜಿ ಸಚಿವ ಶ್ರೀಮಂತ ಪಾಟೀಲ, ಸ್ಮಿತಾತಾಯಿ ಶಿರಗಾಂವಕರ, ಅರವಿಂದ ದೇಶಪಾಂಡೆ, ಜಗದೀಶ ಶರ್ಮಾ ಸಂಪ, ರಾಮ ಕುಲಕರ್ಣಿ, ಬಿ.ಎಲ್.ಪಾಟೀಲ ಇತರರಿದ್ದರು.
ಅಥಣಿ: ಭಗವದ್ಗೀತೆ ಮಾನವಕುಲದ ಬದುಕಿಗೆ ದಾರಿದೀಪ ಎಂದು ಸಮಾಜಸೇವಕಿ ಸ್ಮಿತಾತಾಯಿ ಶಿರಗಾಂವಕರ ಹೇಳಿದರು.
ಪಟ್ಟಣದ ಜಾಧವಜಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸ್ಥಳೀಯ ಜ್ಞಾನಸತ್ರ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವ್ಯಾಸಭಾರತ ಪ್ರವಚನ ಮಾಲಿಕೆ ಉದ್ಘಾಟಿಸಿ ಮಾತನಾಡಿ, ಮಹಾಭಾರತ ಮತ್ತು ಭಗದ್ಗೀತೆ ಕೇವಲ ಒಂದೇ ಧರ್ಮಕ್ಕೆ ಸೀಮಿತವಾಗಿಲ್ಲ. ಇವು ಮಾನವಕುಲದ ಬದುಕಿಗೆ ಮೌಲ್ಯ ಬೋಧಿಸುವ ಮಾರ್ಗದರ್ಶಕವಾಗಿವೆ ಎಂದರು.
ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ಜೀವನ ಮೌಲ್ಯಗಳ ಆಗರವಾಗಿರುವ ಭಗವದ್ಗೀತೆ ಜೀವನದ ಮೌಲ್ಯ ಎತ್ತಿ ಹಿಡಿಯುವ ಕೈಗನ್ನಡಿಯಂತಿದೆ. ಭಾರತೀಯರಾದ ನಾವು ಗ್ರಂಥಗಳ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜ್ಞಾನಸತ್ರ ವೇದಿಕೆ ಪಾತ್ರಗಳ ಮೂಲಕ ಮಹಾಭಾರತವನ್ನು ಪರಿಚಯಿಸುತ್ತಿರುವುದು ಉತ್ತಮ ಕಾರ್ಯ ಎಂದರು. ಬೆಂಗಳೂರಿನ ಉಪನ್ಯಾಸಕ ವಿದ್ವಾನ್ ಜಗದೀಶಶರ್ಮಾ ಸಂಪ ಮಾತನಾಡಿ, ಮಹಾಭಾರತದ ಪ್ರತಿಯೊಂದು ಪಾತ್ರವೂ ಪಾಠ ಕಲಿಸುತ್ತದೆ ಎಂದು ತಿಳಿಸಿದರು. ಸ್ಥಳೀಯ ಆರ್‌ಎಸ್‌ಎಸ್ ಮುಖಂಡ ಅರವಿಂದ ದೇಶಪಾಂಡೆ ಮಾತನಾಡಿ, ಜ್ಞಾನದ ಹಸಿವು ನೀಗಿಸಲು ಮತ್ತು ನಾಡಿನ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳೆಸಲು ಜ್ಞಾನಸತ್ರ ವೇದಿಕೆ ಸ್ಥಾಪಿಸಲಾಗಿದ್ದು, ಎಲ್ಲರೂ ಅದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಜೆ.ಎ.ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ರಾಮ ಕುಲಕರ್ಣಿ, ಹಿರಿಯರಾದ ಬಿ.ಎಲ್. ಪಾಟೀಲ, ಸಾಹಿತಿ ಬಾಳಾಸಾಹೇಬ ಲೋಕಾಪುರ, ಸ್ಥಳೀಯ ರೋಟರಿ ಕ್ಲಬ್ ಘಟಕದ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಇತರರಿದ್ದರು. ಪ್ರಿಯಂವದಾ ಹುಲಗಬಾಳಿ ನಿರೂಪಿಸಿದರು. ಮಹಾಲಿಂಗ ಮೇತ್ರಿ ವಂದಿಸಿದರು.