ಬೆಳಗಾವಿಯ ಸಾಂಬ್ರಾ ಬಳಿ ಹಾದು ಹೋಗಿರುವ ಬಳ್ಳಾರಿ ನಾಲೆಯನ್ನು ತುಂಬಿಕೊಂಡಿರುವ ಜಲಕಳೆ.
ಬೆಳಗಾವಿ: ನಗರದ ಬಳ್ಳಾರಿ ನಾಲೆ ಉಪಯೋಗಕ್ಕಿಂತ ಅಪಾಯಕಾರಿಯಾಗಿದ್ದೇ ಹೆಚ್ಚು. ಪ್ರತಿ ಮಳೆಗಾಲಕ್ಕೂ ಮುಂಚೆ ಸ್ವಚ್ಛಗೊಳಿಸದಿದ್ದರೆ ಸಮಸ್ಯೆಯಾಗುತ್ತಲೇ ಇರುತ್ತದೆ. ಈ ವರ್ಷ ನಾಲೆಯುದ್ದಕ್ಕೂ ಜಲಕಳೆ ಆವರಿಸಿದ್ದು, ನೀರಿನ ಹರಿವಿಗೆ ಅಡ್ಡಿಯಾಗಿದೆ. ಇದನ್ನು ಹೀಗೆ ಬಿಟ್ಟಲ್ಲಿ ಮಳೆಗಾಲದಲ್ಲಿ ಜಮೀನು ಹಾಗೂ ಜನವಸತಿ ಪ್ರದೇಶಕ್ಕೆ ನೀರು ನುಗ್ಗುವ ಆತಂಕವಿದೆ.
ನಗರದ ಹೊರಭಾಗದಲ್ಲಿ ಹರಿಯುವ ನಾಲೆಯಲ್ಲಿ ತ್ಯಾಜ್ಯ, ರಾಸಾಯನಿಕ ನೀರು ಸೇರಿದ್ದು, ಇದರ ಮೇಲೆ ಜಲಕಳೆ ವ್ಯಾಪಿಸಿದೆ. ಗಿಡಗಂಟಿಗಳೂ ಬೆಳೆದಿವೆ. ಯಳ್ಳೂರು ರಸ್ತೆಯಿಂದ ಆರಂಭಗೊಳ್ಳುವ ನಾಲೆ, ಅನಗೋಳ, ವಡಗಾವಿ, ಶಹಾಪುರ, ಹಳೇ ಬೆಳಗಾವಿ, ಕುಡಚಿ ಮಾರ್ಗವಾಗಿ ಖನಗಾಂವ ಮೂಲಕ ಗೋಕಾಕನತ್ತ ಸಾಗುತ್ತದೆ. ಸದ್ಯ ಯಳ್ಳೂರನಿಂದ ಸುಳೇಬಾವಿವರೆಗೂ ಜಲಕಳೆ ಹಬ್ಬಿದೆ. ಈಚೆಗೆ ಸುರಿದ ಎರಡ್ಮೂರು ಮಳೆಯಿಂದ ನೀರು ಹರಿದು ಹೋಗದೆ ಅಕ್ಕಪಕ್ಕದ ಜಮೀನುಗಳಲ್ಲೇ ನಿಂತು ಸಾಕಷ್ಟು ಹಾನಿ ಮಾಡಿದೆ. ಇದನ್ನು ತೆರವುಗೊಳಿಸದಿದ್ದರೆ 2019 ಮತ್ತು 2021ರಲ್ಲಿ ಎದುರಾಗಿದ್ದ ಪರಿಸ್ಥಿತಿ ಪುನರಾವರ್ತನೆಯಾಗುವ ಸಾಧ್ಯತೆಯಿದೆ.
ಈ ಮೊದಲು ನಾಲೆ ದಂಡೆಯಲ್ಲಿದ್ದ ಕೃಷಿ ಜಮೀನುಗಳಿಗೆ ಮಾತ್ರವೇ ತೊಂದರೆಯಾಗುತ್ತಿತ್ತು. ಈಚೆಗೆ ನಾಲೆಗೆ ಸಮೀಪದಲ್ಲೇ ಜನವಸತಿ ಬೆಳೆದಿದ್ದು, ಸರಾಗವಾಗಿ ನೀರು ಹರಿದು ಹೋಗದೇ ಹಿನ್ನೀರು ಹತ್ತಾರು ಬಡಾವಣೆಗಳನ್ನು ಆವರಿಸಿಕೊಳ್ಳುತ್ತಿದೆ. ನಾಲೆ ನೀರಾವರಿ ಇಲಾಖೆ ವ್ಯಾಪ್ತಿಗೆ ಬಂದರೆ, ಬಾಧಿತಗೊಳ್ಳುವ ಪ್ರದೇಶ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರುತ್ತದೆ. ಇದು ಅನೇಕ ಸಲ ಸಮಸ್ಯೆಗೆ ಕಾರಣವಾಗುತ್ತಿದೆ.
ಹೊಸ ರಾಷ್ಟ್ರೀಯ ಹೆದ್ದಾರಿ ಸೇತುವೆ ನಿರ್ಮಾಣಕ್ಕೆ ಕೆಳಭಾಗದಲ್ಲಿ ಎರಡ್ಮೂರು ಅಡಿ ಸಿಮೆಂಟ್ ತಳಪಾಯ ಹಾಕಿದ್ದರಿಂದ ನೀರು ತಡೆ ಹಿಡಿದಂತಾಗುತ್ತಿದೆ. ಇದು ಭವಿಷ್ಯದಲ್ಲಿ ನಗರಕ್ಕೆ ಮಾರಕವಾಗಲಿದೆ. ಇದನ್ನು ಸರಿಪಡಿಸಿ ಎಂದು 2006ರಲ್ಲೇ ಖಾಸಬಾಗ, ವಡಗಾವಿ ಭಾಗದ ಜನ ಸರ್ವೋದಯ ಸೇವಾ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ, ಅಂದಿನ ಜಿಲ್ಲಾಧಿಕಾರಿ ಶಾಲಿನಿ ರಜನೀಶಗೆ ಮನವಿ ಸಲ್ಲಿಸಿದ್ದರು. 20 ವರ್ಷ ಕಳೆದರೂ ಈ ತಾಂತ್ರಿಕ ಅಡ್ಡಿ ಸರಿಪಡಿಸುವ ಬಗ್ಗೆ ಈವರೆಗೂ ಕ್ರಮವಾಗಿಲ್ಲ. ಹರಿಯುವ ನೀರನ್ನು ಹೂಳು ತಡೆಯುತ್ತಿದ್ದು, ಅದರ ಮೇಲೆ ಜಲಕಳೆ ಬೆಳೆಯುತ್ತಿದೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳೂಕರ.
ಒಟ್ಟಾರೆಯಾಗಿ ಮಳೆಗಾಲಕ್ಕೂ ಮುಂಚೆ ನಾಲೆ ಆವರಿಸಿಕೊಂಡಿರುವ ಜಲಕಳೆ ಬಿಡಿಸದಿದ್ದರೆ ಮಳೆಗಾಲದಲ್ಲಿ ಸುತ್ತಲಿನ ಪ್ರದೇಶವನ್ನು ಸುತ್ತಿಕೊಳ್ಳುವುದು ಖಚಿತ ಎನ್ನುತ್ತಾರೆ ಸ್ಥಳೀಯರು.
ಪಾಲಿಕೆ ವ್ಯಾಪ್ತಿಯಲ್ಲಿರುವ ಬಳ್ಳಾರಿನಾಲೆಯ ಎಲ್ಲ ಉಪನಾಲೆಗಳ ಹೂಳೆತ್ತುವಟೆಂಡರ್ ಏ.16ರಿಂದ ಆರಂಭಗೊಳ್ಳುತ್ತದೆ.ಮುಂಚಿತವಾಗಿ ನೀರಿನ ಮಾರ್ಗಗಳನ್ನು ಸರಿಮಾಡುತ್ತೇವೆ. ಬಳ್ಳಾರಿ ನಾಲೆ ಪಾಲಿಕೆ ವ್ಯಾಪ್ತಿಗೆಬರುವುದಿಲ್ಲ. ಆದರೆ, ಇದರಿಂದ ಬಾಧಿತವಾಗುವುದೆಲ್ಲಪಾಲಿಕೆ ವ್ಯಾಪ್ತಿ ಪ್ರದೇಶ. ಹೀಗಾಗಿ, ಮಳೆಗಾಲಕ್ಕೆಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಲುಸಂಬಂಧಿಸಿದ ಇಲಾಖೆ ಗಮನಕ್ಕೆ ತರಲಾಗುವುದು.