ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೈಲಹೊಂಗಲದಲ್ಲಿ ಕೈಗೊಂಡಿರುವ 19ನೇ ದಿನದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ರಫೀಕ ಬಡೇಘರ ಇತರರಿದ್ದರು. 
ಬೆಳಗಾವಿ

ತಾಳ್ಮೆ ಪರೀಕ್ಷಿಸಿದರೆ ತಕ್ಕ ಉತ್ತರ

ರಾಘವೇಂದ್ರಗೌಡ ಭೀ ಪಾಟೀಲ್
ಕಿತ್ತೂರು ಚನ್ನಮ್ಮ ಅಭಿವೃದ್ಧಿ ಪ್ರಾಧಿಕಾರಕ್ಕೆ 200 ಕೋಟಿ ರೂ.ಅನುದಾನ ನೀಡಬೇಕು. ಹಾಗೂ ಕಿತ್ತೂರು ಚನ್ನಮ್ಮನ ನವಿಕೃತ ಸಮಾಧಿ ಸ್ಥಳವನ್ನು ಪುನಃ ಅದ್ದೂರಿಯಾಗಿ ಉದ್ಘಾಟನೆ ಮಾಡಬೇಕೆಂದು ಒತ್ತಾಯಿಸಿ ಚನ್ನಮ್ಮಾಜಿ ಅಭಿಮಾನಿಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ವತಿಯಿಂದ ನಗರದಲ್ಲಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ 19ನೇ ದಿನ ಪೂರೈಸಿತು.
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಕಿತ್ತೂರು ಚನ್ನಮಾಜಿ ಸಮಾಧಿ ಸ್ಥಳಕ್ಕೆ ಸಂಬಂಧಿಸಿದ ನಾಲ್ಕು ಪ್ರಮುಖ ಬೇಡಿಕೆ ಈಡೇರಿಸುವಂತೆ ಹೋರಾಟಗಾರರು ಸರ್ಕಾರವನ್ನು ಒತ್ತಾಯಿಸಿದರು. 19ನೇ ದಿನದ ಧರಣಿಗೆ ಗೋಸಂಗಿ ಸಮುದಾಯ ಹಾಗೂ ಅಲೆಮಾರಿ ಒಕ್ಕೂಟ ಸಂಘದವರು ಬೆಂಬಲ ನೀಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಗಾರರ ಸಭೆ: ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹೋರಾಟಗಾರರ ಸಭೆಯಲ್ಲಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮುಂದಿನ ಹೋರಾಟ ಕುರಿತು ಚರ್ಚಿಸಿದರು.
ಬಳಿಕ ಮಾತನಾಡಿದ ಅವರು, ಧರಣಿ 19 ದಿನ ಪೂರೈಸಿದರೂ ಸರ್ಕಾರದಿಂದ ಸ್ಪಂದನೆ ಸಿಗದಿರುವುದು ಬೇಸರದ ಸಂಗತಿ. ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ,ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ, ಕಿತ್ತೂರು ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ, ಮುಖಂಡರಾದ ಮಲ್ಲಿಕಾರ್ಜುನ ಹುಂಬಿ, ಬಿ.ಎಂ.ಚಿಕ್ಕನಗೌಡರ, ಅಪ್ಪಾಸಾಹೇಬ ಲಕ್ಕುಂಡಿ, ಬೀರಪ್ಪ ದೇಶನೂರ ಮಾತನಾಡಿದರು.
ಮುಖಂಡರಾದ ಗುರು ಮೆಟಗುಡ್ಡ, ಗುರುಪಾದ ಕಳ್ಳಿ, ಜಗದೀಶ ಬೂದಿಹಾಳ, ಸುಭಾಸ ತುರಮರಿ ಹಾಗೂ ಸುನೀಲ ಮರಕುಂಬಿ, ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಮಹೇಶ ಹರಕುಣಿ, ಮುರಗೇಶ ಗುಂಡ್ಲೂರ, ರಿತೇಶ ಪಾಟೀಲ, ಬಸವರಾಜ ನೇಸರಗಿ, ರಾಜು ಬೋಳನ್ನವರ, ಮಾರುತಿ ಕೊಂಡುರ, ಗೋಪಿ ಪವಾರ, ಸುಭಾಸ ಬಾಗೇವಾಡಿ, ಆನಂದ ಮೂಗಿ, ರವಿ ಪವಾರ, ಬಸವರಾಜ ಉಪ್ಪಾರ, ಅಜೀತ ಕಾವಳೆ, ಪ್ರಲ್ಲಾದ ಪವಾರ, ಕಿಶನ್ ಪವಾರ ಇತರರಿದ್ದರು.