ಚಿಕ್ಕೋಡಿ ತಾಲೂಕಿನ ಬಲದಂಡೆ ಕಾಲುವೆಗೆ ಅನ್ನಪೂರ್ಣೇಶ್ವರಿ ಏತ ನೀರಾವರಿ ಯೋಜನೆ ನೀರು ಹರಿಯುತ್ತಿರುವುದು. 
ಬೆಳಗಾವಿ

ವರದಾನವಾದ ಅನ್ನಪೂರ್ಣೇಶ್ವರಿ ಏತ ನೀರಾವರಿ

ಚಿಕ್ಕೋಡಿ:

ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆದರೆ, ಇಲ್ಲಿನ ಅನ್ನಪೂರ್ಣೇಶ್ವರಿ ಏತ ನೀರಾವರಿ ಯೋಜನೆ ರೈತರ ಬದುಕಿಗೆ ಹೊಸ ಚೈತನ್ಯ ತುಂಬುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ.

ಕಳೆದ 15 ದಿನಗಳಿಂದ ಅನ್ನಪೂರ್ಣೇಶ್ವರಿ ಏತ ನೀರಾವರಿ ಯೋಜನೆಯಡಿ ತಾಲೂಕಿನ ಕಲ್ಲೋಳ ಸಮೀಪದ ಕೃಷ್ಣಾ ನದಿಯಿಂದ ಅತ್ಯಾಧುನಿಕ ಪಂಪ್ ಮೂಲಕ ನೀರನ್ನು ಎತ್ತಿ ಸುಮಾರು 15 ಕಿಮೀ. ದೂರದಲ್ಲಿರುವ ಚಿಕ್ಕೋಡಿ ಬಲದಂಡೆ ಕಾಲುವೆಯ ಬ್ರಾಂಚ್ ಕೆನಾಲ್ (ಸಿಬಿಸಿ) ಮೂಲಕ ನಿರಂತರವಾಗಿ ಹರಿಸಲಾಗುತ್ತಿದೆ. ಪರಿಣಾಮವಾಗಿ ಹಿರೇಕೋಡಿ, ನಾಗರಾಳ, ನೇಜ, ಶಿರಗಾಂವ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಗಮನಾರ್ಹವಾಗಿ ಏರಿಕೆಯಾಗಿದೆ ಎಂದರು.
ಕಾಲುವೆಯಲ್ಲಿ ನಿರಂತರವಾಗಿ ನೀರು ಹರಿಯುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಅಗತ್ಯ ನೀರು ಲಭ್ಯವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನ-ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಯೂ ಬಹುತೇಕ ನಿವಾರಣೆಯಾಗಿದೆ. ಒಣ ಬೇಸಾಯ ಅವಲಂಬಿಸಿದ್ದ ರೈತರಲ್ಲಿ ಹೊಸ ಆತ್ಮವಿಶ್ವಾಸ ಮೂಡಿದ್ದು, ಕೃಷಿ ಚಟುವಟಿಕೆ ಮತ್ತೆ ಚುರುಕುಗೊಂಡಿವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಅನ್ನಪೂರ್ಣೇಶ್ವರಿ ಏತ ನೀರಾವರಿ ರೈತರ ಬದುಕಿಗೆ ಭರವಸೆ ತುಂಬುವ ಯೋಜನೆಯಾಗಿದೆ. ರೈತರ ಹಿತದೃಷ್ಟಿಯಿಂದ ಕ್ಷೇತ್ರದಲ್ಲಿ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು.

— ಪ್ರಕಾಶ ಹುಕ್ಕೇರಿ ವಿ.ಪ. ಸದಸ್ಯ ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ