ಬೆಳಗಾವಿಯಲ್ಲಿ ಗ್ರಹಣ ದೋಷ ಪರಿಹಾರಕ್ಕೆ ಗ್ರಹಣ ಅಂತ್ಯ ನಂತರ ಜರುಗಿದ ಹೋಮ.  
ಬೆಳಗಾವಿ

ಗ್ರಹಣ ಆಚರಣೆಗೆ ದೇವಾಲಯಗಳು ಬಂದ್

ಡಿ.ವಿ. ಕಮ್ಮಾರ
ಬೆಳಗಾವಿ : ಭಾರತದಲ್ಲಿ ದರ್ಶನಭಾಗ್ಯವಿಲ್ಲದಿದ್ದರೂ ಮಂಗಳವಾರ ಸಂಭವಿಸಿದ ಚಂದ್ರಗ್ರಹಣದ ಆಚರಣೆಗಳನ್ನು ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ಜನರು ಶಾಸ್ತ್ರೋಕ್ತವಾಗಿ ಪಾಲಿಸಿದರು.
ಗ್ರಹಣದಿಂದಾಗಿ ಬೆಳಗಾವಿ ನಗರ ಹೊರತುಪಡಿಸಿ ಗ್ರಾಮೀಣ ಭಾಗದಲ್ಲಿ ಹೋಳಿ ಆಚರಣೆಯನ್ನು ಬುಧವಾರಕ್ಕೆ ಮುಂದೂಡಲಾಗಿತ್ತು. ನಗರದಲ್ಲಿ ಬೆಳಗ್ಗೆ 10ರೊಳಗೆ ಅಶ್ವತ್ಥಾಮ ದೇವಸ್ಥಾನದ ಉರುಳು ಸೇವೆ, ಚವಾಟಗಲ್ಲಿ ದೇವಸ್ಥಾನದ ಪ್ರಮುಖ ಹೋಳಿ ಪೂಜಾ ಕಾರ್ಯ ಪೂರ್ಣಗೊಳಿಸಲಾಗಿತ್ತು.ಮಧ್ಯಾಹ್ನ 11ರ ನಂತರ ಹೋಳಿ ಧಾರ್ಮಿಕ ಆಚರಣೆಗಳು ನಡೆಯಲಿಲ್ಲ.
ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನದಲ್ಲಿನ ಶಿವಲಿಂಗ ಸಹಿತ ಎಲ್ಲ ದೇವರ ಮೂರ್ತಿಗಳನ್ನು ಬೆಳಗ್ಗೆ 11ರ ಹೊತ್ತಿಗೆ ವಿಶೇಷ ಪೂಜೆ ಕೈಗೊಂಡು, ಬಿಲ್ವಪತ್ರಿ ಮತ್ತು ಶ್ವೇತವರ್ಣದ ಬಟ್ಟೆಯಿಂದ ಮುಚ್ಚಿಡಲಾಗಿತ್ತು. ಇದೇ ರೀತಿ ಅನೇಕ ದೇವಸ್ಥಾನಗಳಲ್ಲಿ ಮೂರ್ತಿಗಳನ್ನು ಶ್ವೇತ ಬಟ್ಟೆಯಲ್ಲಿ ಸುತ್ತಿ, ಬಾಗಿಲು ಹಾಕಲಾಗಿತ್ತು. ಸಂಜೆ 6.30ರ ನಂತರ ಬೀಗ ತೆರೆದು, ಶುದ್ಧಿ ಕಾರ್ಯ ಕೈಗೊಂಡು, ಪೂಜಾ ವಿಧಿ-ವಿಧಾನ ಕೈಗೊಳ್ಳಲಾಯಿತು.
ಕಪಿಲೇಶ್ವರ ಮಂದಿರದಲ್ಲಿ ಗ್ರಹಣ ದೋಷ ಪರಿಹಾರ ಹಾಗೂ ಜನ್ಮರಾಶಿಯಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ಹೋಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಉಗರಗೋಳ ವರದಿ:
ಚಂದ್ರಗ್ರಹಣ ಹಿನ್ನೆಲೆಯಲ್ಲಿ ಸಮೀಪದ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಮಂಗಳವಾರ ಮಧ್ಯಾಹ್ನ 12ರಿಂದ ಸಂಜೆ 6.30ರವರೆಗೆ ದೇವಿ ದರ್ಶನ ಮತ್ತು ತೀರ್ಥ ಪ್ರಸಾದ ವಿತರಣೆ ಬಂದ್ ಮಾಡಲಾಗಿತ್ತು. ಹೋಳಿ ಹುಣ್ಣಿಮೆ ಪ್ರಯುಕ್ತ ವಿವಿಧ ಕಡೆಗಳಿಂದ ಬಂದಿದ್ದ ಭಕ್ತರು, ಬೆಳಗ್ಗೆಯೇ ದೇವಿ ದರ್ಶನ ಪಡೆದರು. ಸಂಜೆ 6.40ರ ನಂತರ ದೇವಸ್ಥಾನ ಶುದ್ಧೀಕರಣಗೊಳಿಸಿ, ವಿಶೇಷ ಪೂಜೆ ಮಾಡಿದ ನಂತರ ಪುನಃ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.