ಬೆಳಗಾವಿ ನಗರದ ಕೆಎಲ್‌ಎಸ್ ಸಂಸ್ಥೆ ಗೋಗಟೆ ತಾಂತ್ರಿಕ ಮಹಾವಿದ್ಯಾಲಯಕ್ಕೆ ಮಂಗಳವಾರ ವಿಜ್ಞಾನಿಗಳ ತಂಡ ಭೇಟಿ ನೀಡಿ ಅಧ್ಯಾಪಕರೊಂದಿಗೆ ಸಂವಾದ ನಡೆಸಿದರು. ಡಾ.ಪಾವುಲೂರಿ ಶ್ರೀನಿವಾಸು ಟಿ., ಪಿ.ಡಿ.ರಾಜನ್, ಡಾ.ಅನಂತಕುಮಾರ್, ಡಾ.ವಿಜಯ ಅಟವಲೆ, ಡಾ.ಗಣೇಶ ಚಾಟೆ ಇತರರಿದ್ದರು.
ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಂಕ ಗಳಿಕೆಗೆ ಸೀಮಿತವಾಗದೆ ಪಠ್ಯದ ಜತೆಗೆ ಬಹು ಕೌಶಲ ಬೆಳೆಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಹೈದಾರಾಬಾದನ ಸಿಎಸ್‌ಐಆರ್-ಐಐಸಿಟಿ ವಿಜ್ಞಾನಿ ಡಾ.ಪಾವುಲೂರಿ ಶ್ರೀನಿವಾಸು ಅಭಿಮತ ವ್ಯಕ್ತಪಡಿಸಿದರು.
ಇಲ್ಲಿನ ಕೆಎಲ್‌ಎಸ್ ಸಂಸ್ಥೆ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಅಧ್ಯಾಪಕರೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವಿವಿಧ ಸಂಶೋಧನೆ ನಡೆಯುತ್ತಿದ್ದು, ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನ ಬೆಳೆಸಿಕೊಳ್ಳಬೇಕು. ಹೊಸ ತಂತ್ರಜ್ಞಾನ ಕಲಿಯುವ ಉತ್ಸಾಹ ತೋರಬೇಕು ಎಂದರು.ಕೇರಳದ ತಿರುವನಂತಪುರಂ ವಿಜ್ಞಾನಿ ವೆಂಕಟೇಶ್ ಜೆ. ಮಾತನಾಡಿ, ಯಾವುದೇ ಇಂಜಿನಿಯರಿಂಗ್ ಕೋರ್ಸ್ ಇದ್ದರೂ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನದ ಬಳಕೆಯಾಗುತ್ತಿದೆ. ಆದ್ದರಿಂದ ಎಐ ತಂತ್ರಜ್ಞಾನ ಕಲಿಯಬೇಕು. ಕೋಡಿಂಗ್ ಮತ್ತು ಡೇಟಾ ವಿಶ್ಲೇಷಣೆ ಮುಖ್ಯವಾಗಿದೆ. ಅಧ್ಯಾಪಕರು ತಂತ್ರಜ್ಞಾನ ಬಳಕೆ ಮೂಲಕ ಪರಿಣಾಮಕಾರಿ ಭೋಧನೆಗೆ ಒತ್ತು ನೀಡಬೇಕು ಎಂದರು.
ಕೇರಳದ ವಿಜ್ಞಾನಿಗಳಾದ ಟಿ.ಪಿ.ಡಿ.ರಾಜನ್, ಡಾ.ಅನಂತಕುಮಾರ್ ಅವರು ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಸಕ್ರಿಯ ಸಂಶೋಧಕರೊಂದಿಗೆ ಸಂವಾದ ನಡೆಸಿ,ಸಂಶೋಧನಾ ಚಟುವಟಿಕೆಗಳನ್ನು ಚರ್ಚಿಸಿದರು.