ದೇವರ ಶಿಗೀಹಳ್ಳಿ ಗ್ರಾಮದಲ್ಲಿ ತೆರಿಗೆ ಸಂಗ್ರಹ ಅಭಿಯಾನವನ್ನು ಜಿಪಂ ಸಿಇಒ ರಾಹುಲ್ ಶಿಂಧೆ ಪರಿಶೀಲಿಸಿದರುಮ
ಬೆಳಗಾವಿ: ಚನ್ನಮ್ಮನ ತಾಲೂಕಿನ ದೇವರಶೀಗಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ತೆರಿಗೆ ವಸೂಲಾತಿ ಮೆಗಾ ಅಭಿಯಾನದ ಪ್ರಗತಿಯನ್ನು ಪರಿಶೀಲಿಸಲು ಜಿಲ್ಲಾ ಪಂಚಾಯತ ಬೆಳಗಾವಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮ ಪಂಚಾಯತಿಯಲ್ಲಿ ನಡೆಯುತ್ತಿರುವ ತೆರಿಗೆ ವಸೂಲಾತಿ ಕ್ರಮ, ಸಾರ್ವಜನಿಕರ ಪ್ರತಿಕ್ರಿಯೆ, ಸಿಬ್ಬಂದಿಗಳ ಕಾರ್ಯನಿರ್ವಹಣೆ ಹಾಗೂ ಆಡಳಿತಾತ್ಮಕ ಕ್ರಮಗಳ ಕುರಿತು ಸ್ಥಳದಲ್ಲೇ ಮಾಹಿತಿ ಪಡೆದು ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಸಲಹೆ–ಸೂಚನೆಗಳನ್ನು ನೀಡಿದರು.
ಈ ವೇಳೆ ಮಾತನಾಡಿದ ಅವರು, ತೆರಿಗೆ ವಸೂಲಾತಿ ಕೇವಲ ಸರ್ಕಾರದ ಆದಾಯವನ್ನು ಹೆಚ್ಚಿಸಲು ಮಾತ್ರ ಸೀಮಿತವಲ್ಲ, ಬದಲಿಗೆ ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ, ಸಾರ್ವಜನಿಕ ಸೌಲಭ್ಯಗಳ ಸುಧಾರಣೆ, ನೀರು–ವಿದ್ಯುತ್–ರಸ್ತೆ ಮುಂತಾದ ಜನಜೀವನಕ್ಕೆ ಅವಶ್ಯಕ ಸೇವೆಗಳ ಗುಣಮಟ್ಟ ಹೆಚ್ಚಿಸುವಲ್ಲಿ ತೆರಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಬಾಕಿ ಉಳಿದ ತೆರಿಗೆಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು, ಆಡಳಿತಕ್ಕೆ ಸಹಕರಿಸಬೇಕು ಮತ್ತು ಗ್ರಾಮಾಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕೋರಿದರು.
ಅಭಿಯಾನವನ್ನು ಪಾರದರ್ಶಕ, ಪರಿಣಾಮಕಾರಿ ಮತ್ತು ಜನಸ್ನೇಹಿ ರೀತಿಯಲ್ಲಿ ನಡೆಸಬೇಕು, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ, ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಮಸಳಿ, ಜಿಪಂಯ ಸಹಾಯಕ ನಿರ್ದೇಶಕರು ಚಂದ್ರಶೇಖರ ಬಾರ್ಕಿ, ತಾಪಂ ಸಹಾಯಕ ನಿರ್ದೇಶಕರು ಮಹಮ್ಮದ್ ಗೌಸ್ ರಿಸಲ್ದಾರ್, ವಿಜಯ ಪಾಟೀಲ್, ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿ ಬಡಿಗೇರ, ಉಪಾಧ್ಯಕ್ಷೆ ವಿಜಯಾ ಹಂಚಿನಮನಿ, ತಾಪಂ ಸಿಬ್ಬಂದಿ ಸಂಗನಗೌಡ ಹಂದ್ರಾಳ, ಪಿಡಿಓ ವಿನಯಕುಮಾರ ಕೊರವಿ, ಕಾರ್ಯದರ್ಶಿ ಮಡಿವಾಳಪ್ಪ ಕಲಭಾಂವಿ, ಸರ್ವೇ ಸಿಬ್ಬಂದಿ ಹಾಗೂ ಪಂಚಾಯಿತಿ ಸಿಬ್ಬಂದಿ ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.