ಬೆಳಗಾವಿ: ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠಕ್ಕೆ ಬರುವ ಅರ್ಜಿಗಳ ಪ್ರಮಾಣ ಹೆಚ್ಚಳವಾಗಿದ್ದು, ವರ್ಷಕ್ಕೆ 6,000 ರಿಂದ 7,000 ಅರ್ಜಿಗಳನ್ನು ವಿಚಾರಣೆಗೊಳಪಡಿಸಿ ಇತ್ಯರ್ಥ ಪಡಿಸಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಪೀಠದ ರಾಜ್ಯ ಮಾಹಿತಿ ಆಯುಕ್ತ ಪ್ರಕಾಶ ನಾರಾಯಣ ಚನ್ನಾಳ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರ್ನಾಟಕ ಮಾಹಿತಿ ಹಕ್ಕು ಆಯೋಗವು ಕಳೆದ ಒಂದು ವರ್ಷದಲ್ಲಿ ರಾಷ್ಟ್ರದಲ್ಲಿಯೇ ದಾಖಲೆ ಪ್ರಮಾಣದಲ್ಲಿ 40 ಸಾವಿರ ದ್ವೀತಿಯ ಮೇಲ್ಮನವಿ ಪ್ರಕರಣಗಳನ್ನು ಇತ್ಯರ್ಥ ಮಾಡಿದೆ. ಕರ್ನಾಟಕ ಮಾಹಿತಿ ಆಯೋಗ ಬೆಳಗಾವಿ ಪೀಠದಲ್ಲಿ ಪ್ರತಿದಿನ ಸುಮಾರು 40ರಿಂದ60 ಅರ್ಜಿಗಳ ವಿಚಾರಣೆ ಆಫ್‌ಲೈನ್ ಮತ್ತು ಆನ್‌ಲೈನನಲ್ಲಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಗ್ರಾಮೀಣ ಭಾಗದ ಜನರ ಅರ್ಜಿಗಳಿಗೆ ಹೆಚ್ಚಿನ ಒತ್ತು ನೀಡಿ ಕುಡಿಯುವ ನೀರು, ರಸ್ತೆ, ವಿದ್ಯುತ್ ಸರಬರಾಜು, ಸ್ವಚ್ಚತೆ, ಆರೋಗ್ಯ ಮತ್ತು ಇತ್ಯಾದಿ ಮೂಲ ಸೌಕರ್ಯಗಳ ಸಮಸ್ಯೆಗಳ ವಿಚಾರಣೆಗಳು ಇತ್ಯರ್ಥವಾಗುತ್ತಿದ್ದು, ಮಾಹಿತಿ ನೀಡದೇ ಇರುವ ಅಧಿಕಾರಿಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡಲು ಶಿಸ್ತು ಕ್ರಮ ಜರುಗಿಸಿ, ವಿಚಾರಣೆ ಸಮಿತಿಯ ಶಿಪಾರಸು, ದಂಡ ಮತ್ತು ಅರ್ಜಿದಾರರಿಗೆ ಪರಿಹಾರದ ಆದೇಶಗಳನ್ನು ಮಾಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.