ಅಥಣಿ ಧನ್ವಂತರಿ ಚಿಕ್ಕಮಕ್ಕಳ ಆಸ್ಪತ್ರೆಯಲ್ಲಿ ಥಲಸ್ಸೆಮಿಯಾ ರೋಗದ ವಿಶೇಷ ಘಟಕವನ್ನು ಡಾ.ಪ್ರಮೋದ ಮಿರಜ ಉದ್ಘಾಟಿಸಿದರು. ಡಾ.ಬಸಗೌಡ ಕಾಗೆ, ಡಾ.ಸಚಿನ ಮಿರಜ, ಡಾ.ನಿರಧಿ ಮಿರಜ, ಡಾ.ರಾಘವೇಂದ್ರ ಲೋಕೂರ ಇತರರಿದ್ದರು.
- ಡಾ.ಪ್ರಮೋದ ಮಿರಜ ಸಲಹೆ
- ಧನ್ವಂತರಿ ಆಸ್ಪತ್ರೆಯಲ್ಲಿ ಚಿಕಿತ್ಸಾ ಘಟಕ ಲೋಕಾರ್ಪಣೆ
ಅಥಣಿ: ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುವ ಮಕ್ಕಳಿಗೆ ಪಟ್ಟಣದ ಧನ್ವಂತರಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದೆ ಎಂದು ಚಿಕ್ಕಮಕ್ಕಳ ತಜ್ಞವೈದ್ಯ ಡಾ.ಪ್ರಮೋದ ಮಿರಜ ಹೇಳಿದರು.
ಪಟ್ಟಣದ ಧನ್ವಂತರಿ ಆಸ್ಪತ್ರೆಯಲ್ಲಿ ಸಂವೇದನಾ ಮೆಡಿಕಲ್ ಫೌoಡೇಷನ್ ಆಶ್ರಯದಲ್ಲಿ ಭಾನುವಾರ ಥಲಸ್ಸೆಮಿಯಾ ಚಿಕಿತ್ಸಾ ಘಟಕ ಉದ್ಘಾಟಿಸಿ ಮಾತನಾಡಿ, ಚಿಕ್ಕಮಕ್ಕಳಲ್ಲಿ ಕೆಂಪು ರಕ್ತಹೀನತೆ, ಕುಂಠಿತ ಬೆಳವಣಿಗೆ, ಹೊಟ್ಟೆ ಉಬ್ಬು ಮತ್ತು ಉಸಿರಾಟದ ತೊಂದರೆ ಲಕ್ಷಣಗಳು ಇದ್ದರೆ ಅಂತಹ ಮಕ್ಕಳಿಗೆ ತಿಂಗಳಿಗೊಮ್ಮೆ ರಕ್ತ ವರ್ಗಾವಣೆ ಮಾಡುವುದು ಕಡ್ಡಾಯ. ತೂಕ ಮತ್ತು ವಯಸ್ಸಿನ ಮೇಲೆ ಈ ಸೌಲಭ್ಯಗಳು ರಿಯಾಯಿತಿ ದರದಲ್ಲಿ ನಮ್ಮ ಆಸ್ಪತ್ರೆಯಲ್ಲಿ ದೊರಕುತ್ತವೆ. ವಿಶೇಷ ಚಿಕಿತ್ಸಾ ಸೌಲಭ್ಯ ಮತ್ತು ನುರಿತ ತಜ್ಞವೈದ್ಯರು ದಿನದ ೨೪ ಗಂಟೆ ಲಭ್ಯವಿದ್ದು, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಚಿಕಿತ್ಸೆ ನೀಡುತ್ತಾರೆ ಎಂದರು.
ವೈದ್ಯ ಡಾ.ಸಚಿನ ಮಿರಜ, ಡಾ.ನಿರಧಿ ಮಿರಜ ಮಾತನಾಡಿ, ಧನ್ವಂತರಿ ಆಸ್ಪತ್ರೆಯಲ್ಲಿ ಸ್ಕಾನಿಂಗ್, ಲ್ಯಾಬ್, ಐಸಿಯು, ಜನೆಟಿಕ್ ಟೆಸ್ಟಿಂಗ್ ಸೌಲಭ್ಯ ಕಡಿಮೆ ದರದಲ್ಲಿ ಲಭ್ಯವಿದೆ. ಅಸ್ಥಿಮಜ್ಜೆ ವರ್ಗಾವಣೆಗೆ ಸಂಬಂಧಿಸಿ ಉತ್ತಮ ಗುಣಮಟ್ಟದ ಚಿಕಿತ್ಸೆ ಲಭಿಸಲಿದೆ ಎಂದು ತಿಳಿಸಿದರು.
ಸಂವೇಧನಾ ಮೆಡಿಕಲ್ ಫೌoಡೇಷನ್ ಅಧ್ಯಕ್ಷ ಭರಕತ ಫನಾಳಕರ ಮಾತನಾಡಿ, ಸರ್ಕಾರ ಥಲಸ್ಸೆಮಿಯಾ ರೋಗದ ಬಗ್ಗೆ ಗಂಭೀರ ಚಿಂತನೆ ಕೈಗೊಂಡು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಡೇ ಕೇರ್ ಸೆಂಟರ್ ಆರಂಭಿಸಿ ಜನಜಾಗೃತಿ ಮೂಡಿಸಬೇಕು. ಸರ್ಕಾರ ಬಿಪಿಎಲ್ ಕಾರ್ಡ್ದಾರರಿಗೆ ೨೦ ಲಕ್ಷ ರೂ. ವರೆಗೂ ಅಸ್ಥಿಮಜ್ಜೆ ವರ್ಗಾವಣೆಗೆ ನೀಡಿದ ಆದೇಶ ಕಾರ್ಯರೂಪಕ್ಕೆ ಬಂದಿಲ್ಲ ಎಂದರು.
ಡಾ.ಬಸಗೌಡ ಕಾಗೆ, ಡಾ.ರಾಘವೇಂದ್ರ ಲೋಕೂರ, ಎಂ.ಎಸ್.ಮುಜಾವರ ಇತರರಿದ್ದರು.