ಅಥಣಿಯ ಆರ್.ಎಚ್.ಕುಲಕರ್ಣಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಸಚಿವ ಸತೀಶ ಜಾರಕಿಹೊಳಿ, ಅನಿಲ ಸೌದಾಗಾರ, ಪ್ರಶಾಂತ ಗೊಡಕೆ, ಸದಾಶಿವ ಬುಟಾಳೆ, ಸುನೀತಾ ಐಹೊಳೆ ಇತರರಿದ್ದರು.
ಅಥಣಿ: ತಳ ಸಮುದಾಯಗಳು ಉದ್ಯಮಶೀಲತೆ ಅಳವಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಆರ್.ಎಚ್.ಕುಲಕರ್ಣಿ ಸಭಾಂಗಣದಲ್ಲಿ ಎಸ್ಸಿ, ಎಸ್ಟಿ ಹಬ್ ಹಾಗೂ ಅಖಿಲ ಕರ್ನಾಟಕ ಚರ್ಮಕಾರ ಸಮಾಜ ಒಕ್ಕೂಟದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಂಎಸ್‌ಎಂಇ ನೋಂದಣಿ ಮಾಡಿಕೊಂಡವರು ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆದು ಉದ್ಯಮಿಗಳಾಗಿ ಬೆಳೆಯಬೇಕು. ಮಹಿಳೆಯರು ಮತ್ತು ಸಣ್ಣ ಉದ್ಯಮಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಸಾಲ ಯೋಜನೆಗಳನ್ನು ರೂಪಿಸಿದ್ದು 10 ಕೋಟಿ ರೂ.ವರೆಗೆ ಸಾಲ ಸೌಲಭ್ಯ ಲಭ್ಯವಿದೆ. ಡಾ.ಬಿ.ಆರ್.ಅಂಬೇಡ್ಕರ್ ದೂರದೃಷ್ಟಿ ಫಲವಾಗಿ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ಅಭಿವೃದ್ಧಿಯ ಅನೇಕ ಅವಕಾಶಗಳಿದ್ದು, ಸದುಪಯೋಗ ಪಡೆದುಕೊಳ್ಳಬೇಕು.
ಅಖಿಲ ಕರ್ನಾಟಕ ಚರ್ಮಕಾರ ಸಮಾಜ ಮಹಾಒಕ್ಕೂಟದ ಅಧ್ಯಕ್ಷ ಅನಿಲ ಸೌದಾಗರ ಮಾತನಾಡಿ, ಸಮಗಾರ (ಚರ್ಮಕಾರ) ಸಮುದಾಯ ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ಒಂದಾಗಿದೆ. ಸರ್ಕಾರದ ಸೌಲಭ್ಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಬೇಕಿದೆ. ಸಮುದಾಯದ ಪ್ರತಿಯೊಬ್ಬರು ಉದ್ಯಮಿಗಳಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಜಾಗೃತಿ ಕಾರ್ಯಕ್ರಮಗಳನ್ನು ತಾಲೂಕು ಮಟ್ಟಕ್ಕೆ ತರಲಾಗಿದೆ ಎಂದರು. ಬೆಳಗಾವಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ ಗೋಡಕೆ ಮಾತನಾಡಿ, ಉದ್ಯಮಶೀಲತೆಯಲ್ಲಿ ಯಶಸ್ಸು ಸಾಧಿಸಲು ಎಂಎಸ್‌ಎಂಇ ಪ್ರಮಾಣಪತ್ರ ಅತ್ಯಗತ್ಯವಾಗಿದೆ. ಸ್ವಸಹಾಯ ಸಂಘಗಳಿಗೆ 20 ಲಕ್ಷ ರೂ.ವರೆಗೆ ಸಾಲ ಸೌಲಭ್ಯವಿದ್ದು, ಆತ್ಮನಿರ್ಭರ ಯೋಜನೆಯಡಿ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
ಕೆ.ಸುರೇಶ, ಜ್ಯೋತಿಷಕುಮಾರ ಶರ್ಮಾ, ಸತೀಶ ಬಸಗೌಡರ, ಎಸ್.ಪಿ.ಮಾಂಗ, ಶೇಖರ ಸೌದಾಗಾರ, ಸದಾಶಿವ ಬುಟಾಳೆ, ರಮೇಶ ಸಿಂದಗಿ, ದಿಲೀಪ ಕಾಂಬಳೆ, ಸುನೀತಾ ಐಹೊಳೆ, ಸದಾಶಿವ ಬುಟಾಳೆ, ರಾಕೇಶ ಸೌದಾಗರ, ಶಿವಾನಂದ ಸೌದಾಗರ ಇತರರಿದ್ದರು.