ಸುನ್ನಾಳ ಗ್ರಾಮದ ಧೀರ ಮಾರುತಿ ದೇವಸ್ಥಾನ.
ರಾಮದುರ್ಗ:
ನೇರಮುಖದ ಆಂಜನೇಯ: ಮಲಪ್ರಭಾ ನದಿದಡದಲ್ಲಿ ಹಸಿರಿನಿಂದ ಕಂಗೊಳಿಸುವ ಸುನ್ನಾಳ ಗ್ರಾಮದ ಧೀರ ಮಾರುತಿ ದೇವಸ್ಥಾನ ರಾಮದುರ್ಗ ಪಟ್ಟಣದಿಂದ 5 ಕಿ.ಮೀ. ದೂರದದಲ್ಲಿದ್ದು, ವಿಶಿಷ್ಟವಾಗಿದೆ. ಸಾಮಾನ್ಯವಾಗಿ ಆಂಜನೇಯನ ಮೂರ್ತಿಯ ಮುಖ ಎಡ ಅಥವಾ ಬಲಕ್ಕೆ ತಿರುಗಿ ನಿಂತಿರುವುದನ್ನು ಕಾಣುತ್ತೇವೆ. ಆದರೆ ಸುನ್ನಾಳದ ಆಂಜನೇಯನ ಮುಖ ನೇರವಾಗಿದ್ದು, ಬಲು ಅಪರೂಪ. ನೇರ ಮೊಗವುಳ್ಳವನಾಗಿದ್ದರಿಂದ ಧೀರಮಾರುತಿ ಎನ್ನಲಾಗುತ್ತದೆ.
ಗ್ರಾಮದಲ್ಲಿ ಪಶ್ಚಿಮಾಭಿಮುಖವಾಗಿ ನೆಲೆಸಿರುವ ಆಂಜನೇಯ ಭಕ್ತರ ಸಂಕಷ್ಟ ಪರಿಹರಿಸುವ ಕಾಮಧೇನುವಾಗಿದ್ದು, ಬೆಳಗ್ಗೆ 4, 10 ಹಾಗೂ ಸಂಜೆ 5 ಗಂಟೆಗೆ ನಿತ್ಯ ಮೂರು ಬಾರಿ ಪೂಜೆ ನಡೆಯುತ್ತದೆ. ಪ್ರತಿ ಶನಿವಾರ, ಅಮಾವಾಸ್ಯೆ ಹಾಗೂ ಹಬ್ಬದ ದಿನಗಳಂದು ಭಕ್ತರು ತಂಡೋಪತಂಡವಾಗಿ ಕಾಲ್ನಡಿಗೆ ಮೂಲಕ ಆಗಮಿಸಿ ಮಲಪ್ರಭೆಯಲ್ಲಿ ಸ್ನಾನ ಮಾಡುತ್ತಾರೆ. ನಂತರ ದೇವಸ್ಥಾನದವರೆಗೂ ದೀರ್ಘದಂಡ ನಮಸ್ಕಾರ ಮಾಡಿ ಹೊತ್ತ ಹರಕೆ ತೀರಿಸಿ ಇಷ್ಟಾರ್ಥ ಪೂರೈಸುವಂತೆ ಮೊರೆಯಿಡುತ್ತಾರೆ. ದೇವರ ದರ್ಶನದ ನಂತರ ಅನ್ನ ದಾಸೋಹ ಸೇವೆ ಇರುತ್ತದೆ.
ಕಾರ್ತಿಕೋತ್ಸವ ವಿಶೇಷ: ಕಾರ್ತಿಕೋತ್ಸವದ ಪ್ರಯುಕ್ತ ಅಶ್ವಾರೂಢ ಧೀರ ಮಾರುತಿಗೆ ಬೆಳಗ್ಗೆ 5 ಗಂಟೆಗೆ ಮಹಾಭಿಷೇಕ, ವಿಶೇಷ ಪೂಜೆ, ಮಂಗಳಾರತಿ ವಾದ್ಯಘೋಷಗಳೊಂದಿಗೆ ನಡೆಯಲಿದೆ. ಸಂಪ್ರದಾಯದಂತೆ ರಾತ್ರಿ 8 ಗಂಟೆಗೆ ಗ್ರಾಮದ ದೊಡ್ಡಗೌಡರ ಕುಟುಂಬದ ಬಾಪುಗೌಡ ಮಲ್ಲನಗೌಡ ಪಾಟೀಲ ನಿವಾಸದಿಂದ ಮಹಾಆರತಿ ಸುಮಂಗಲೆಯರು, ವಾದ್ಯಮೇಳಗಳೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ನಂತರ ಮಾರುತಿ ದೇವರ ಪಲ್ಲಕ್ಕಿ ಉತ್ಸವ ಆರಂಭವಾಗುತ್ತದೆ.
ದೇವಸ್ಥಾನದ ಅರ್ಚಕರು, ಗ್ರಾಮದ ಹಿರಿಯರು ದೀಪಸ್ತಂಭ ಹಾಗೂ ದೇವಸ್ಥಾನದ ಆವರಣದಲ್ಲಿ ದೀಪ ಬೆಳಗಿಸಿ ಕಾರ್ತಿಕೋತ್ಸವ ಆರಂಭಿಸುತ್ತಾರೆ. ರಾತ್ರಿ 10ಕ್ಕೆ ಗ್ರಾಮದ ಕಲಾವಿದರು ಕುರುಕ್ಷೇತ್ರ ಪೌರಾಣಿಕ ನಾಟಕದಲ್ಲಿ ಅಭಿನಯಿಸಲಿದ್ದಾರೆ.