ಬೆಳಗಾವಿಯ ಸಂಗೊಳ್ಳಿ ರಾಯಣ್ಣ ತರಬೇತಿ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಮತ್ತು ಉದ್ಯೋಗಾವಕಾಶಗಳ ಕಾರ್ಯಕ್ರಮವನ್ನು ಬಸವರಾಜ ಹೆಗ್ಗನಾಯಕ ಉದ್ಘಾಟಿಸಿದರು. ಸಂತೋಷ ಕಾಮಗೌಡರ, ಗುರುಪಾದಯ್ಯ ಹೀರೆಮಠ, ಹಣಮಂತರಾಯ ಟಿ ಇತರರಿದ್ದರು.
ಬೆಳಗಾವಿ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗ ಪಡೆಯುವ ಗುರಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವ್ಯವಸ್ಥಿತವಾಗಿ ತಯಾರಿ ನಡೆಸಬೇಕು ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಸಂತೋಷ ಕಾಮಗೌಡರ ಹೇಳಿದರು.
ಬೆಳಗಾವಿಯ ಸಂಗೊಳ್ಳಿ ರಾಯಣ್ಣ ತರಬೇತಿ ಮಹಾವಿದ್ಯಾಲಯದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಉದ್ಯೋಗ ಆಯುಕ್ತಾಲಯದ ವತಿಯಿಂದ ಆಯೋಜಿಸಿದ್ದ ಸ್ಟಡಿ ಸರ್ಕಲ್ ಯೋಜನೆಯಡಿ ಸ್ಪರ್ಧಾತ್ಮಕ ಮತ್ತು ಉದ್ಯೋಗಾವಕಾಶಗಳ ಕಾರ್ಯಕ್ರಮದಲ್ಲಿ ಮಾತನಾಡಿ, ನಿರಂತರ ಅಧ್ಯಯನ, ಸಮಯದ ಸದುಪಯೋಗ, ಶಿಸ್ತು ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಜಿಪಂ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಮಾತನಾಡಿ,ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೇವಲ ಒಂದು ಪರೀಕ್ಷೆಯಾಗಿ ಪರಿಗಣಿಸದೆ, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಅವಕಾಶವಾಗಿ ನೋಡಬೇಕು. ಪರೀಕ್ಷೆಯ ಪಠ್ಯಕ್ರಮವನ್ನು ಅರ್ಥಮಾಡಿಕೊಂಡು, ದಿನನಿತ್ಯದ ಅಧ್ಯಯನಕ್ಕೆ ವೇಳಾಪಟ್ಟಿ ರೂಪಿಸಿಕೊಂಡು, ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಬೇಕು. ಸಾಮಾನ್ಯ ಜ್ಞಾನಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಿರಂತರವಾಗಿ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕ ಗುರುಪಾದಯ್ಯ ಹೀರೆಮಠ, ಹಣಮಂತರಾಯ ಟಿ, ಸಂತೋಷ ನಾವಲಗಿ, ಆಕಾಶ ಬೇವಿನಕಟ್ಟಿ, ಶಿವರಾಜ್ ಹೊಳೆಪಗೋಳ, ಮಂಜುನಾಥ್ ಇತರರಿದ್ದರು.