ಚಿಕ್ಕೋಡಿ ಪಟ್ಟಣದ ಬಸವಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣವನ್ನು ಪ್ರೊ.ಎ.ಎಂ.ಗುರವ ಉದ್ಘಾಟಿಸಿದರು. ಪ್ರೊ.ಅಂಜನಾದೇವಿ ತಾಮ್ರಗುಂಡಿ, ಡಾ.ಬಿ.ಜಿ.ಕುಲಕರ್ಣಿ, ಮಹೇಶ ಭಾತೆ, ಲಕ್ಷ್ಮಿಕಾಂತ ನಾಯಕ, ಶಾಂತಿನಾಥ ಬೋಸುಗೆ ಇತರರಿದ್ದರು.
- ಪ್ರೊ.ಎ.ಎಂ.ಗುರವ ಅಭಿಪ್ರಾಯ
- ರಾಷ್ಟ್ರೀಯ ವಿಚಾರ ಸಂಕಿರಣ
ಚಿಕ್ಕೋಡಿ: ಅಂಕ ಗಳಿಸುವುದರ ಮೂಲಕ ಉದ್ಯೋಗ ಗಳಿಸುವ ಕಾಲ ಬದಲಾಗಿ ಕೌಶಲ ಬೆಳೆಸಿಕೊಂಡು ಜಗತ್ತಿನ ಸ್ಪರ್ಧೆಗೆ ಯಾರು ಸಿದ್ಧರಾಗುತ್ತಾರೋ, ಅವರು ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಕೊಲ್ಲಾಪುರದ ಡಿ.ವೈ.ಪಾಟೀಲ ಡಿಮ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ಎಂ.ಗುರವ ಹೇಳಿದರು.
ಪಟ್ಟಣದ ಕೆಎಲ್ಇ ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ವತಿಯಿಂದ ವಾಣಿಜ್ಯ ಮತ್ತು ನಿರ್ವಹಣೆಯಲ್ಲಿ ಉದಯಿಸುತ್ತಿರುವ ಪರಿಕಲ್ಪನೆ, ಸಮಸ್ಯೆ ಮತ್ತು ಸವಾಲು ವಿಷಯ ಕುರಿತು ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.ಜಾಗತೀಕರಣ ಪ್ರಭಾವದಿಂದ ಔದ್ಯೋಗಿಕ ಕ್ಷೇತ್ರದಲ್ಲಿ ಆಫೀಸ್ ಕೆಲಸ ಮಾಡುವ ಪ್ರಕ್ರಿಯೆ ಬದಲಾಗಿ ಮನೆಯಲ್ಲಿ ಕೆಲಸ ಮಾಡುವ ಸಂಸ್ಕೃತಿ ಬರುತ್ತಿದೆ. ಕೌಶಲ ಸ್ಪರ್ಧೆ, ಪ್ರತಿಭೆ ಅವಕಾಶ ಉಪಯೋಗಿಸಿಕೊಳ್ಳಲು ರಾಷ್ಟ್ರೀಯ ವಿಚಾರ ಸಂಕಿರಣ ಹೆಚ್ಚಿನ ಪ್ರೋತ್ಸಾಹ ನೀಡುತ್ತವೆ ಎಂದು ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ವಾಣಿಜ್ಯ ಶಾಸö ವಿಭಾಗದ ಹಿರಿಯ ಪ್ರಾಧ್ಯಾಪಕಿ ಪ್ರೊ.ಅಂಜನಾದೇವಿ ತಾಮ್ರಗುಂಡಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದ ಸವಾಲು ಎದುರಿಸಲು ಕೌಶಲ ಅಭಿವೃದ್ಧಿ, ನಾಯಕತ್ವ ಗುಣ ಹಾಗೂ ಹೊಂದಾಣಿಕೆ ಮನೋಭಾವ ಬೆಳೆಸಿಕೊಳ್ಳಬೇಕು. ಲಾಭ ಗಳಿಕೆಗೆ ಸೀಮಿತವಾಗದೆ, ಸಾಮಾಜಿಕ ಹೊಣೆಗಾರಿಕೆ, ಪರಿಸರ ಸಂರಕ್ಷಣೆ ಹಾಗೂ ಸಮಗ್ರ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದರು.
ಕಾಲೇಜು ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಮಹೇಶ ಭಾತೆ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಪ್ರಭಾಕರ ಕೋರೆ, ಸಂಸ್ಥೆ ಕಾರ್ಯಾಧ್ಯಕ್ಷ ಅಮಿತ ಕೋರೆ, ಆಡಳಿತ ಮಂಡಳಿ ನಿರ್ದೇಶಕ ಮಹಾಂತೇಶ ಕವಟಗಿಮಠ ಸೇರಿ ಎಲ್ಲ ನಿರ್ದೇಶಕರು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ಮಾಹಿತಿ ಮತ್ತು ತಂತ್ರಜ್ಞಾನವನ್ನು ಜೀವನದ ಒಳತಿಗಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಲಕ್ಷ್ಮಿಕಾಂತ ನಾಯಕ, ಶಾಂತಿನಾಥ ಬೋಸುಗೆ, ಸವಿತಾ ಹಿಟ್ನಿ, ಸಂಜೀವಿನಿ ಮಠಪತಿ ಇತರರಿದ್ದರು. ಶ್ರೀವಲ್ಯ ಪಾಟೀಲ ನಿರೂಪಿಸಿದರು. ವಿಶಾಲ ಖೋತ ವಂದಿಸಿದರು.