ಬೆಳಗಾವಿ ಕೆಎಲ್ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಡಾ.ಸಿದ್ದು ಹುಲ್ಲೊಳ್ಳಿ ಉದ್ಘಾಟಿಸಿದರು. ಡಾ.ಎಚ್.ಎಸ್.ಮೇಳಿನಮನಿ, ಗಿರಿಜಾ ಹಿರೇಮಠ, ಸಾರಿಕಾ ನಾಗರೆ, ಡಾ.ಸಿ.ರಾಮರಾವ್ ಇತರರಿದ್ದರು.
ವಿದ್ಯಾರ್ಥಿಗಳು ಸ್ಪಷ್ಟ ಗುರಿ, ಶಿಸ್ತು, ಸಮಯಪಾಲನೆ ಹಾಗೂ ನಿರಂತರ ಪರಿಶ್ರಮ ಅಳವಡಿಸಿಕೊಂಡಲ್ಲಿ ಯಶಸ್ಸು ಪಡೆಯಲು ಸಾಧ್ಯ. ಸಮಾಜವು ಸಾಧಕರನ್ನು ಮಾತ್ರ ಗುರುತಿಸುತ್ತದೆ. ಆದ್ದರಿಂದ ಪಠ್ಯದ ಜತೆಗೆ ಕ್ರೀಡೆ, ಸಂಘ ಹಾಗೂ ಕ್ಲಬ್ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ ವ್ಯಕ್ತಿತ್ವ ವೃದ್ಧಿಸಿಕೊಳ್ಳಬೇಕು ಎಂದು ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತ ಡಾ.ಸಿದ್ದು ಹುಲ್ಲೊಳ್ಳಿ ಹೇಳಿದರು.
ಕೆಎಲ್ಇ ಸಂಸ್ಥೆ ಲಿಂಗರಾಜ ಕಾಲೇಜಿನಲ್ಲಿ ಗುರುವಾರ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿ, ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನವೇ ಯಶಸ್ಸಿನ ಮೂಲಮಂತ್ರ. ಜೀವನದಲ್ಲಿ ಸಾಧಕರಾಗಿ ತಂದೆ-ತಾಯಿಗೆ ಗೌರವ ನೀಡಬೇಕು. ಗುರುಗಳನ್ನು ಪೂಜ್ಯಭಾವದಿಂದ ಕಾಣಬೇಕು. ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬದುಕಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ಮನುಷ್ಯರಾಗಿರಬೇಕು. ಮನುಷ್ಯತ್ವಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ ಎಂದು ಕಿವಿಮಾತು ಹೇಳಿದರು.
ಎನ್‌ಸಿಸಿ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಪಡೆದ ಯೋಗರಾಜ ರಾಮಗೋನಗಟ್ಟಿ, 20 ವರ್ಷದೊಳಗಿನವರ ರಾಷ್ಟ್ರೀಯ ಅಥ್ಲೆಟಿಕ್ಸ್‌ನ 400 ಮೀಟರ್ ಹರ್ಡಲ್ಸ್ ಮತ್ತು ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಅಪೂರ್ವಾ ನಾಯಿಕ ಮತ್ತು ಭವ್ಯಾ ಸಿ.ಜೆ. ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿ ಅಕ್ಷಯ ಪಾಟೀಲ ಪ್ರಾರ್ಥಿಸಿದರು. ಲಿಂಗರಾಜ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ಗಿರಿಜಾ ಹಿರೇಮಠ ಸ್ವಾಗತಿಸಿದರು. ನಿಖಿತಾ ಬೆದರೆ ಮತ್ತು ಸಿದ್ದನಗೌಡ ಪಾಟೀಲ ನಿರೂಪಿಸಿದರು. ಇಂಗ್ಲಿಷ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಾರಿಕಾ ನಾಗರೆ ಅತಿಥಿಗಳನ್ನು ಪರಿಚಯಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ರಾಮರಾವ್ ವಂದಿಸಿದರು.