ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಮೊಹಮ್ಮದ ರೋಷನ್ ಮಾತನಾಡಿದರು. ರಾಹುಲ ಶಿಂಧೆ, ಆರ್.ಬಿ.ಬಸರಗಿ ಇತರರಿದ್ದರು.
ಬೆಳಗಾವಿ:ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳೆಗಳು ಹಾನಿಯಾಗಿದ್ದು, ಈ ಕುರಿತು ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ಜರುಗಿಸಿ ಬೆಳೆ ಹಾನಿ ವರದಿಯನ್ನು ಮಾಸಂತ್ಯದೊಳಗೆ ಸಲ್ಲಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಮಾತನಾಡಿ, ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳಹಾನಿ ಆಗಿರುವ ಕುರಿತು ದೂರುಗಳು ಬಂದಿದ್ದು, ಕೂಡಲೇ ಜಂಟಿ ಸಮೀಕ್ಷೆ ನಡೆಸಬೇಕು. ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣವೇ ಸ್ಪಂದಿಸಬೇಕು ಎಂದರು.
ಜಿಲ್ಲೆಯಲ್ಲಿನ ಶಿಥಿಲಾವಸ್ಥೆಯಲ್ಲಿರುವಂತಹ ಮನೆಗಳ ಸಮೀಕ್ಷೆ ಜರುಗಿಸಿ ಸಮೀಕ್ಷಾ ವರದಿಯನ್ನು ತ್ವರಿತವಾಗಿ ಒದಗಿಸಬೇಕು. ಅಲ್ಲದೇ ಶೀಥಿಲಾವಸ್ಥೆ ಮನೆಯಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಗ್ರಾಮ ಪಂಚಾಯತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಂಬಂಧಿಸಿದ ಅಧಿಕಾರಿಗಳು ಕೂಡ ಈ ವರದಿಯನ್ನು ಬೇಗ ನೀಡಬೇಕು. ಬಿಸಿಲಿನ ತಾಪಮಾನ ಹೆಚ್ಚಿರುವ ಕಾರಣ ಜಿಲ್ಲೆಯ ಅಗತ್ಯವಿರುವ ಕಡೆಯಲ್ಲಿ ಕುಡಿಯುವ ನೀರು ಸಮರ್ಪಕ ಪೂರೈಕೆಯಾಗುವಂತೆ ನಿಗಾವಹಿಸಬೇಕು ಎಂದು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಡಬೇಕು. ಮಳೆಯಾಗುತ್ತಿರುವ ಕಾರಣ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಬಾವಿಸಬೇಡಿ. ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆ ಆಲಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷೃ ಮಾಡಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಪಂ ಸಿಇಒ ರಾಹುಲ ಶಿಂಧೆ ಮಾತನಾಡಿ, ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಿದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಎಲ್ಲ ಗ್ರಾಪಂಗಳಿಗೆ ನಿರ್ದೇಶನ ನೀಡಲಾಗಿದೆ. ಒಂದು ನೀರಿನ ಸಮಸ್ಯೆ ಎದುರಾದರೆ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಗ್ರಾಪಂಗಳಲ್ಲಿ ಸ್ವಂತ ಟ್ಯಾಂಕರ್ ಹೊಂದಿರುವುದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಕುಡಿಯುವ ನೀರಿನ ಪೂರೈಕೆಗೆ ಯಾವುದೇ ರೀತಿಯ ಅನುದಾನದ ಕೊರತೆ ಇರುವುದಿಲ್ಲ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಬಿ ಬಸರಗಿ, ಮಹಾನಗರ ಪಾಲಿಕೆ ಆಯುಕ್ತ ಎಂ. ಕಾರ್ತಿಕ್,ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಜಿಲ್ಲಾ ಆರೋಗ್ಯಾಧಿಕಾರಿ ಈಶ್ವರ ಗಡಾದಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಹಾಂತೇಶ ಮುರಗೋಡ ಇತರರಿದ್ದರು.