ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಅಂಗವಿಕಲರ ಕ್ರೀಡಾಕೂಟದ ಉದ್ಘಾಟನೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಂಡು ಎಸೆಯಲು ಅಣಿಯಾಗಿದ್ದು ಹೀಗೆ. 
ಬೆಳಗಾವಿ

ಅಂಗವಿಕಲರಿಗೆ ವಿಶೇಷ ಯೋಜನೆಗೆ ಪ್ರಸ್ತಾವನೆ ಸಲ್ಲಿಕೆ

ಬೆಳಗಾವಿ: ಬಜೆಟ್‌ನಲ್ಲಿ ಅಂಗವಿಕಲರಿಗೆ ವಿಶೇಷವಾದ ಯೋಜನೆಗಳನ್ನು ನೀಡುವುದು ಹಾಗೂ ಅಂಗವಿಕಲ ಮಕ್ಕಳ ಶಾಲೆಗಳ ಶಿಕ್ಷಕರ ವೇತನವನ್ನು ಶೇ.40ರಷ್ಟು ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಅಂಗವಿಕಲರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಂಗವಿಕಲರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರ, ವಿಶೇಷ ಚೇತನರ ಸಬಲೀಕರಣ ಇಲಾಖೆಯು ಜನರ ಸೇವೆ ಮಾಡುವ ಇಲಾಖೆಯಾಗಿದೆ. ರಾಜ್ಯದಲ್ಲಿ 13 ಲಕ್ಷ ಅಂಗವಿಕಲರಿದ್ದಾರೆ. ಈ ಬಜೆಟ್‌ನಲ್ಲಿ ಎಲ್ಲ ಅಂಗವಿಕಲರಿಗೆ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಪ್ರಸಾವನೆ ಸಲ್ಲಿಸಲಾಗಿದ್ದು, ಜಾರಿಯಾಗುವ ವಿಶ್ವಾಸವಿದೆ ಎಂದರು.
ಅಂಗವಿಕಲರು ಸಾಕಷ್ಟು ಸಾಧನೆ ಮಾಡಿದ್ದಾರೆ, ಪ್ರಶಸ್ತಿಯನ್ನು ತೆಗೆದುಕೊಂಡಿದ್ದಾರೆ. ಇವರು ದೇವರು ಕೊಟ್ಟ ಜೀವನ ಕಷ್ಟ ಎನ್ನದೆ ಜೀವಿಸುತ್ತಿದ್ದಾರೆ. ಆದರೆ ಈಗಿರುವ ಯೋಜನೆಗಳು ಸಾಲುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಸೌಲಭ್ಯ ಸಿಗಬೇಕು, ಶೇ.5ರ ಉದ್ಯೋಗ ಮೀಸಲಾತಿ ಕಡ್ಡಾಯವಾಗಿ ಜಾರಿಯಾಗಬೇಕಿದೆ. ಪ್ರತಿ ಯೋಜನೆಯಲ್ಲೂ ಶೇ.5ರ ಮೀೀಸಲಾತಿಯಿದ್ದರೂ ಯಾರೂ ಇದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಬಿ.ಶ್ರೀನಿವಾಸ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಚೇತನಕುಮಾರ, ಜಿಲ್ಲಾ ನಿರೂಪಣಾಧಿಕಾರಿ ಅಣ್ಣಪ್ಪ ಹೆಗಡೆ, ಎ.ಪಿ.ಎಚ್ ಸಂಸ್ಥೆ ಅಧ್ಯಕ್ಷ ವಾಮನ ಕಟ್ಟಿ, ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಮಿತ್ರಾ, ಜಯಶ್ರೀ ಮಾಳಗಿ ಇತರರಿದ್ದರು.