ಬೆಳಗಾವಿ ಎಸ್ಪಿ ಕಚೇರಿಯಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗಿನ ರಸ್ತೆಯಲ್ಲಿ ನಡೆದುಕೊಂಡು ಹೊರಟಿರುವ ವಿದ್ಯಾರ್ಥಿಗಳು. 
ಬೆಳಗಾವಿ

ಸುಭಾಸ, ಶಿವಬಸವ ನಗರಕ್ಕೆ ಬೇಕು ಸಿಟಿ ಬಸ್

ಡಿ.ವಿ.ಕಮ್ಮಾರ, ಬೆಳಗಾವಿ
ನಗರದಲ್ಲಿರುವ ಪ್ರಮುಖ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಗರ ಸಾರಿಗೆ ಸೇವೆ ಇರುತ್ತದೆ. ಆದರೆ, ರಾಜ್ಯದ ಎರಡನೇ ರಾಜಧಾನಿ ಖ್ಯಾತಿಯ ಬೆಳಗಾವಿಯಲ್ಲಿ ಪ್ರಮುಖ ಸರ್ಕಾರಿ ಕಚೇರಿಗಳಿರುವ ಹಾಗೂ ನಿತ್ಯವೂ ಸಾವಿರಾರು ಜನರು ಓಡಾಡುವ ಪ್ರದೇಶಗಳೇ ನಗರ ಸಾರಿಗೆಯಿಂದ ವಂಚಿತವಾಗಿದ್ದು, ಜನರಿಗೆ ನಡಿಗೆ ಅಥವಾ ಆಟೋ ಸಂಚಾರ ಅನಿವಾರ್ಯವಾಗಿದೆ.
ಸುಭಾಸ ನಗರ ಮತ್ತು ಶಿವಬಸವ ನಗರಗಳಿಗಂತೂ ಸಿಟಿ ಬಸ್ ಸೌಲಭ್ಯವೇ ಇಲ್ಲ. ಇದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸುಭಾಸ ನಗರ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ, ಉತ್ತರ ವಲಯ ಐಜಿಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಬಕಾರಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗಳು, ಜಿಲ್ಲಾ ಸೈಬರ್ ಕ್ರೈಮ್ ಠಾಣೆ, ಕುಮಾರ ಗಂಧರ್ವ ಕಲಾಮಂದಿರ, ವಿವಿಧ ಕಾಲೇಜುಗಳು, ಸರ್ಕಾರಿ ವಿದ್ಯಾರ್ಥಿ ನಿಲಯಗಳು ಮತ್ತು ಹತ್ತಾರು ಪಿಜಿಗಳಿವೆ. ಐದಾರು ಪ್ರಮುಖ ಆಸ್ಪತ್ರೆಗಳು ಇದೇ ಮಾರ್ಗದಲ್ಲಿವೆ. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕೃಷ್ಣದೇವರಾಯ ವೃತ್ತದ (ಹಳೇ ಪಿಬಿ ರಸ್ತೆ) ಮಧ್ಯೆ ಓಡಾಡುವ ಬಸ್‌ಗಳಿದ್ದರೆ ಇಲ್ಲಿನ ನಿವಾಸಿಗಳಿಗೆ ಅನುಕೂಲ ಆಗುತ್ತಿತ್ತು. ಈ ಮಾರ್ಗದಲ್ಲಿ ನಗರ ಸಾರಿಗೆ ಬಸ್‌ಗಳು ಓಡಾಡದ ಕಾರಣ ಎಲ್ಲರೂ ಅನಿವಾರ್ಯವಾಗಿ ಕಾಲ್ನಡಿಗೆ ಅಥವಾ ಆಟೋಗಳನ್ನೇ ಅವಲಂಬಿಸಿದ್ದಾರೆ.
ಕಚೇರಿಗಳಿಗೆ ಭೇಟಿ ನೀಡುವ ವೃದ್ಧರು, ಮಹಿಳೆಯರು, ಆಸ್ಪತ್ರೆಗಳಿಗೆ ಬರುವ ರೋಗಿಗಳು ಮತ್ತು ಸಂಬಂಧಿಗಳು ಹಾಗೂ ಹಾಸ್ಟೆಲ್‌ಗಳಿಗೆ ತೆರಳುವ ವಿದ್ಯಾರ್ಥಿಗಳು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹೋಗುವಾಗ ಏರು ರಸ್ತೆಯಲ್ಲಿ ಬೆಟ್ಟ ಹತ್ತಿದಂತೆ ಸಾಗಬೇಕಾದ ಸ್ಥಿತಿ ಇದೆ. ನಡೆಯಲಾಗದವರು 1 ಕಿ.ಮೀ. ಅಂತರದಲ್ಲಿರುವ ಕಚೇರಿಗೆ ತೆರಳಲು ಆಟೋದವರಿಗೆ ದುಬಾರಿ ಬಾಡಿಗೆ ಕೊಡಬೇಕಿದೆ. ನಿತ್ಯ ಆಟೋಗಳಿಗೆ ಹಣ ತೆರಲಾಗದ ವಿದ್ಯಾರ್ಥಿಗಳು ಬಿಸಿಲು-ಮಳೆಯೆನ್ನದೆ ನಡೆದುಕೊಂಡೇ ಹಾಸ್ಟೆಲ್‌ನಿಂದ ಶಾಲಾ-ಕಾಲೇಜುಗಳಿಗೆ ಹೋಗಿ ಬರಬೇಕಿದೆ.
ಕಿತ್ತೂರು ಚನ್ನಮ್ಮ ವೃತ್ತ ಪ್ರಮುಖ ಕೇಂದ್ರವಾಗಿರುವುದರಿಂದ ಈ ಭಾಗದಲ್ಲಿ ಸಂಚರಿಸಬೇಕಿದ್ದ ಎಲ್ಲ ನಗರ ಸಾರಿಗೆ ಬಸ್‌ಗಳು ಚನ್ನಮ್ಮ ವೃತ್ತವನ್ನು ಸುತ್ತುವರಿದು ಕೃಷ್ಣದೇವರಾಯ ವೃತ್ತದ ಮೂಲಕ ಸಂಚರಿಸುತ್ತವೆ. ಹೀಗಾಗಿ, ಹಳೇ ಪಿಬಿ ರಸ್ತೆಯಲ್ಲಿ ಬಸ್‌ಗಳು ಸಂಚರಿಸುವುದಿಲ್ಲ. ಈ ಮಾರ್ಗದಲ್ಲಿ ಸಿಬಿಟಿಯಿಂದ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ದಶಕಗಳಿಂದ ಇದ್ದರೂ ಬೇಡಿಕೆ ಈ ಬಗ್ಗೆ ಕಾಳಜಿ ತೋರುತ್ತಿಲ್ಲ.