ಮಡಿವಾಳಯ್ಯ ಬಾನಿಮಠ , ಆನಂದ ದಡ್ಡಿಮನಿ
ಚಿಕ್ಕೋಡಿ:ನಕಲಿ ದಾಖಲೆ ಸೃಷ್ಟಿಸಿ ಜಮೀನು ಖರೀದಿ, ಮಾರಾಟ ಮಾಡಿಸಿದ ಆರೋಪದಡಿ ಹುಕ್ಕೇರಿ ತಾಲೂಕಿನ ಉಪನೋಂದಣಿ ಅಧಿಕಾರಿ ಮಡಿವಾಳಯ್ಯ ಬಾನಿಮಠ (34), ಬಾಂಡ್ ರೈಟರ್ ಆನಂದ ದಡ್ಡಿಮನಿ(35) ಪೊಲೀಸರು ಬಂಧಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದಲ್ಲಿರು 2.1 ಎಕರೆ ಜಮೀನಿಗೆ ಬಂಧಿತರು ನಕಲಿ ದಾಖಲೆ ಸೃಷ್ಟಿಸಿ ಹುಕ್ಕೇರಿ ಉಪನೋಂದಣಿ ಕಚೇರಿಯಲ್ಲಿ ಬೇರೆ ವ್ಯಕ್ತಿಯ ಹೆಸರಿನಲ್ಲಿ ನೋಂದಣಿ ಮಾಡಿಸಿ ಮಾರಾಟ ಮಾಡಿದ್ದರು. ಈ ಅಕ್ರಮಕ್ಕೆ ಉಪನೋಂದಣಿ ಅಧಿಕಾರಿ ಸೇರಿ ಹಲವರು ಭಾಗಿಯಾಗಿರುವ ಕುರಿತು ಕುರಣಿವಾಡಿ ಗ್ರಾಮದ ಶಿವಾನಂದ ಮಾನಗಾಂವಿ ಎಂಬುವವರು ಹುಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೇ ಪ್ರಕರಣದ ಅಡಿಯಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದರು.ಆದರೆ,ಉಪ ನೋಂದಣಿ ಅಧಿಕಾರಿ, ಬಾಂಡ್ ರೈಟರ್ ಇಬ್ಬರು ಪರಾರಿಯಾಗಿ ಎಂಟಿಸಿಪೇಟರಿ ಬೇಲ್‌ಗೆ ಅರ್ಜಿ ಹಾಕಿದ್ದರು. ಭಾನುವಾರ ಇಬ್ಬರಿಗೆ ನ್ಯಾಯಾಲಯ ಮಂಜೂರು ಮಾಡಿತ್ತು. ಬಳಿಕ ಪೊಲೀಸ್ ಠಾಣೆಗೆ ಇಬ್ಬರು ಹಾಜರಾಗಿ ಜಾಮೀನು ಪಡೆಯುವ ಸಂದರ್ಭದಲ್ಲಿ ಪೊಲೀಸರು ಮತ್ತೊಂದು ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿರುವ ಪ್ರಕರಣದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಬಳಿಕ ನ್ಯಾಯಾಲಯವು ಇಬ್ಬರನ್ನು ಗೋಕಾಕ ಸಬ್ ಜೈಲಿಗೆ ಕಳುಹಿಸಿ ವಿಚಾರಣೆ ಮುಂದೂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.