ಹಾರೂಗೇರಿಯಲ್ಲಿ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಗಣ್ಯರು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು. ಡಾ.ಯಲ್ಲಪ್ಪ ಹಿಮ್ಮಡಿ, ಬಸವರಾಜ ಬಡಿಗೇರ, ರತನಕುಮಾರ ಜೀರಗ್ಯಾಳ, ಬಿ.ಎಲ್.ಹನುಮಂತಪ್ಪ, ಅಂಬಿಕಾ ಗಾಣಿಗೇರ ಇತರರಿದ್ದರು. 
ಬೆಳಗಾವಿ

ಪರಿಶ್ರಮದಿಂದ ಅಧ್ಯಯನ ಮಾಡಿ

ಪ್ರಶಾಂತ ಹೂಗಾರ
ಹಾರೂಗೇರಿ: ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಮತ್ತು ಸ್ಪಷ್ಟ ಗುರಿಯೊಂದಿಗೆ ಅಧ್ಯಯನ ಮಾಡಿದರೆ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಯಲ್ಲಪ್ಪ ಹಿಮ್ಮಡಿ ಹೇಳಿದರು.
ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ಜಿಲ್ಲಾ ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಚನ್ನದಾಸರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ
ಸಮಾರಂಭದಲ್ಲಿ ಮಾತನಾಡಿದರು.
ಬಾಬಾಸಾಹೇಬ ಅಂಬೇಡ್ಕರ್ ಅವರ ಪರಿಶ್ರಮ ಮತ್ತು ವಿಚಾರ ದಾರಿ ದೀಪವಾಗಬೇಕು ಎಂದರು. ಬಾಗಲಕೋಟೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ ಮಾತನಾಡಿ, ಕಷ್ಟಗಳೇ ಸಾಧನೆಗೆ ಪ್ರೇರಣೆಯಾಗುತ್ತವೆ. ಅವನ್ನು ಮೆಟ್ಟಿ ಮುನ್ನಡೆಯಬೇಕು ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ 75 ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 35 ಸಾಧಕರನ್ನು ಸನ್ಮಾನಿಸಲಾಯಿತು.
ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷ ಬಿ.ಎಲ್.ಹನುಮಂತಪ್ಪ, ಸಿಪಿಐ ರತನಕುಮಾರ ಜೀರಗ್ಯಾಳ, ನಿವೃತ್ತ ಪ್ರಾಂಶುಪಾಲ ಡಾ.ಈರಣ್ಣ ಕೊಕಟನೂರ, ಅಂಬಿಕಾ ಗಾಣಿಗೇರ ಮಾತನಾಡಿದರು. ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಮು ಗಾಣಿಗೇರ, ಕಾರ್ಯದರ್ಶಿ ಲಕ್ಷ್ಮಣ ಅಕ್ಕೆನ್ನವರ, ಕಾರ್ಯಕಾರಿ ಸಮಿತಿಯ ವಸಂತ ಅಕ್ಕೆನ್ನವರ, ಸತ್ಯಪ್ಪ ಗೊಳಸಂಗಿ, ಮುತ್ತಪ್ಪ ಗಾಣಿಗೇರ, ಉದಯ ಗಾಣಿಗೇರ, ನಾಗೇಶ ಕಾಮಶೆಟ್ಟಿ, ಹನುಮಂತ ಅಕ್ಕೆನ್ನವರ, ಸವಿತಾ ಗಾಣಿಗೇರ ಇತರರಿದ್ದರು. ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಾರುತಿ ಅಕ್ಕೆನ್ನವರ ಇತರರಿದ್ದರು. ಶಿಕ್ಷಕ ಹನುಮಂತ ಗಾಣಿಗೇರ ಸ್ವಾಗತಿಸಿದರು. ಪ್ರೊ.ಶಾನೂರಕುಮಾರ ಗಾಣಿಗೇರ ನಿರೂಪಿಸಿದರು. ಸದಾಶಿವ ಗಾಣಿಗೇರ ವಂದಿಸಿದರು.