ಬೆಳಗಾವಿ ಸಾಂಬ್ರಾದ ಏರ್‌ಮೆನ್ ತರಬೇತಿ ಶಾಲೆಯ ಆವರಣದಲ್ಲಿ ಶುಕ್ರವಾರ ಭಾರತೀಯ ವಾಯುಸೇನೆಯ ನಡೆಸಿದ ಸಾರಂಗ್ ಏರ್ ಶೋದಲ್ಲಿ ಸರ್ಕಾರಿ ವಸತಿ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದರು. 
ಬೆಳಗಾವಿ

ಸಾರಂಗ್ ಏರ್ ಶೋಗೆ ಸಾಕ್ಷಿಯಾದ ವಿದ್ಯಾರ್ಥಿಗಳು

ಬೆಳಗಾವಿ:
ಆಕಾಶದಲ್ಲಿ ಹೆಲಿಕಾಪ್ಟರ್‌ಗಳ ಚಿತ್ತಾಕರ್ಷಕ ಕಸರತ್ತು, ಗುಡುಗಿನ ಸದ್ದಿನಂತೆ ಕೇಳಿಬಂದ ಎಂಜಿನ್‌ಗಳ ಘರ್ಜನೆ ಮತ್ತು ಕಣ್ಮನ ಸೆಳೆದ ವೈಮಾನಿಕ ಸಾಹಸಗಳು ಇವೆಲ್ಲವೂ ಸಾಂಬ್ರಾದ ಏರ್‌ಮೆನ್ ತರಬೇತಿ ಶಾಲೆಯ ಆವರಣದಲ್ಲಿ ಭಾರತೀಯ ವಾಯುಸೇನೆಯ ನಡೆಸಿದ ಸಾರಂಗ್ ಏರ್ ಶೋ ದೃಶ್ಯಗಳು.
ಸಾಂಬ್ರಾದ ಏರ್‌ಮೆನ್ ತರಬೇತಿ ಶಾಲೆಯಲ್ಲಿ ನಡೆಯುತ್ತಿರುವ ಏರ್ ಶೋ ಅಪರೂಪದ ಅನುಭವವನ್ನು ಜಿಲ್ಲೆಯಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಿವಿಧ ಶಾಲೆಗಳ 373 ಎಸ್‌ಎಸ್‌ಎಲ್‌ಸಿ ಹಾಗೂ 287 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 660 ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಶುಕ್ರವಾರ ಕಣ್ತುಂಬಿಕೊಂಡು ಸಂಭ್ರಮಿಸಿದರು.
ಅಗ್ನಿವೀರವಾಯು ಮೊದಲ ಬ್ಯಾಚ್‌ನ ಪಾಸಿಂಗ ಔಟ್ ಪರೇಡ ಅಂಗವಾಗಿ ಆಯೋಜಿಸಿದ್ದ ಈ ವಿಶೇಷ ಏರ್ ಶೋದಲ್ಲಿ ಭಾರತೀಯ ವಾಯುಸೇನೆಯ ಪ್ರಸಿದ್ಧ ಸಾರಂಗ ಹೆಲಿಕಾಪ್ಟರ್ ಪ್ರದರ್ಶನ ತಂಡವು ರೋಚಕ ಸಾಹಸ ಪ್ರದರ್ಶನ ನೀಡಿತು. ವಿಶ್ವದಲ್ಲೇ ಐದು ಹೆಲಿಕಾಪ್ಟರ್‌ಗಳನ್ನು ಒಳಗೊಂಡ ಏಕೈಕ ಡಿಸ್ಪ್ಲೇ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಾರಂಗ ತಂಡವು ಸ್ವದೇಶಿ ನಿರ್ಮಿತ ಹೆಲಿಕಾಪ್ಟರ್‌ಗಳ ಮೂಲಕ ಆಕಾಶದಲ್ಲಿ ಮನಮೋಹಕ ವಿನ್ಯಾಸಗಳು ಮತ್ತು ಸಾಹಸಮಯ ಚಲನೆಗಳನ್ನು ಪ್ರದರ್ಶಿಸಿತು.
ಆಕಾಶದಲ್ಲಿ ಒಂದೇ ಲಯದಲ್ಲಿ ಚಲಿಸಿದ ಹೆಲಿಕಾಪ್ಟರ್‌ಗಳ ನಿಖರತೆ ಹಾಗೂ ಪೈಲಟ್‌ಗಳ ಕೌಶಲ್ಯ ವಿದ್ಯಾರ್ಥಿಗಳಲ್ಲಿ ಅಪಾರ ಕುತೂಹಲ ಮತ್ತು ಉತ್ಸಾಹ ಮೂಡಿಸಿತು. ಹಲವರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಇಂತಹ ವೈಮಾನಿಕ ಪ್ರದರ್ಶನವನ್ನು ನೇರವಾಗಿ ವೀಕ್ಷಿಸಿದ ಅನುಭವವನ್ನು ಹಂಚಿಕೊಂಡರು.
ಜಿಪಂ ಸಿಇಒ ರಾಹುಲ ಶಿಂಧೆ ವಿಶೇಷ ಸಹಕಾರದಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಏರ್ ಶೋ ವೀಕ್ಷಿಸಲು ಮತ್ತು ಏರ್ ಕಮಾಂಡರ್ ಅವರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಿಂದಾಗಿ ನೂರಾರು ವಿದ್ಯಾರ್ಥಿಗಳು ವಿಮಾನಯಾನ ಕುರಿತು ಸಮಗ್ರ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಯಿತಿ ಎಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
........................