ಬೈಲಹೊಂಗಲದಲ್ಲಿ ಬಸ್ ಕೊರತೆ ಹಿನ್ನೆಲೆಯಲ್ಲಿ ಆಟೋಗೆ ಜೋತುಬಿದ್ದು ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು. 
ಬೆಳಗಾವಿ

ಬಸ್ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳು ಹೈರಾಣು

ಬೈಲಹೊಂಗಲ: ಶೈಕ್ಷಣಿಕ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಗಳಿಗಾಗಿ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಆದರೆ, ಅಸಮರ್ಪಕ ಬಸ್ ಸೇವೆಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಿತ್ಯ ಪರಿತಪಿಸುವಂತಾಗಿದೆ.
ತಾಲೂಕಿನ ಬೇವಿನಕೊಪ್ಪ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗೆ ಇಲ್ಲಿನ ಬಸವೇಶ್ವರ ಆಶ್ರಯ ಕಾಲನಿ ಸೇರಿ ವಿವಿಧೆಡೆಯ ವಿದ್ಯಾರ್ಥಿಗಳು ನಿತ್ಯವೂ ತೆರಳುತ್ತಾರೆ. ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಪರಿಣಾಮ ನಿಗದಿತ ಸಮಯಕ್ಕೆ ಶಾಲೆ-ಕಾಲೇಜು ತಲುಪಲಾಗದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸುವ ಶಕ್ತಿ ಯೋಜನೆ ಸೀಯರಿಗೆ ವರದಾನವಾಗಿದೆ. ಆದರೆ, ತೀವ್ರ ಜನದಟ್ಟಣೆ, ನೂಕುನುಗ್ಗಲು ಹಾಗೂ ಬಸ್‌ಗಳ ಕೊರತೆಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಸಾರ್ವಜನಿಕರಿಗೆ ಶಾಪವಾಗಿ ಪರಣಮಿಸುತ್ತಿದೆ.
ನಿತ್ಯವೂ ಬಸ್ ಸಮಸ್ಯೆಯಿಂದ ಬೇಸತ್ತ ಬಹುತೇಕ ವಿದ್ಯಾರ್ಥಿಗಳು ಹೆಚ್ಚುವರಿ ಹಣ ನೀಡಿ ಖಾಸಗಿ ವಾಹನ ಹಾಗೂ ಆಟೊಗಳನ್ನು ಅವಲಂಬಿಸುತ್ತಿದ್ದಾರೆ. ಹಣ ನೀಡಿ ಪ್ರಯಾಣಿಸಲು ಅಸಹಾಯಕರಾದ ವಿದ್ಯಾರ್ಥಿಗಳಿಗೆ ಶಿಕ್ಷಣದಿಂದ ವಂಚಿತವಾಗುವ ಭೀತಿ ಎದುರಾಗಿದೆ.