ಬೆಳಗಾವಿ : ಇಂದಿನ ಪೀಳಿಗೆಯ ಸಂಗೀತ ಕಲಾವಿದರಲ್ಲಿ ಗಮಕ ವಾಚನ ಕಲೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಬೆಳಗಾವಿಯಲ್ಲಿ ಮೊದಲ ಬಾರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಜು.25ರಂದು ಶಿವಬಸವ ನಗರದ ಬಾಳೆಕುಂದ್ರಿ ಕಾಲೇಜಿನ ಶಿವಕುಮಾರ ಸಂಬರಗಿಮಠ ಸಭಾಭವನದಲ್ಲಿ ರಾಜ್ಯಮಟ್ಟದ ಗಮಕ ಕಲೋತ್ಸವ ಏರ್ಪಡಿಸಲಾಗಿದೆ ಎಂದು ಅಕಾಡೆಮಿ ಸದಸ್ಯ ಎಂ.ಖಾಸೀಮ್ ಮಲ್ಲಿಗೆಮಡುವು ತಿಳಿಸಿದರು.
ವಾರ್ತಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಅಕಾಡೆಮಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಾಗನೂರು ರುದ್ರಾಕ್ಷಿಮಠದ ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ ಎಂದು ಹೇಳಿದರು.
ಅಂದು ಬೆಳಗ್ಗೆ 9ಕ್ಕೆ ಗಮಕ ಕಲೋತ್ಸವವನ್ನು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಉದ್ಘಾಟಿಸುವರು. ಗದಗ-ಡಂಬಳದ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ, ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ ಅಧ್ಯಕ್ಷತೆ ವಹಿಸುವರು. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಮುಕ್ಕಣ್ಣ ಕರಿಗಾರ, ಬಾಳೇಕುಂದ್ರಿ ತಾಂತ್ರಿಕ ಕಾಲೇಜ್ ಪ್ರಾಚಾರ್ಯ ಡಾ.ಬಿ.ಆರ್.ಪಟಗುಂದಿ, ಅಕಾಡೆಮಿ ರಿಜಿಸ್ಟ್ರಾರ್ ಎನ್.ನರೇಂದ್ರ ಬಾಬು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
ಕಲೋತ್ಸವದಲ್ಲಿ ಬೆಂಗಳೂರಿನ ಷಣ್ಮುಖಪ್ರಿಯ ಸಾಂಸ್ಕೃತಿಕ ಸಂಘ, ಗಾನ ಕಲಾ ಕೇಂದ್ರ, ಶಿಶಿರೇಖಾ ಗಾನ ತರಂಗ, ಬೆಳಗಾವಿಯ ವಾಗ್ದೇವಿ ಸಂಗೀತ ವಿದ್ಯಾಲಯ, ಸರಸ್ವತಿ ಸಂಗೀತ ಪಾಠಶಾಲೆ, ಚಿತ್ರದುರ್ಗದ ಶಕ್ತಿ ಮ್ಯೂಸಿಕ್ ಅಕಾಡೆಮಿ, ಹರಿಹರದ ನಿನಾದ ಗಮಕ ಮತ್ತು ಸಂಗೀತ ಶಾಲೆ ಹಾಗೂ ಶೃಂಗೇರಿಯ ಶಾರದಾ ಸಂಗೀತ ಶಾಲೆಯ ತಂಡಗಳು ನಿಜಗುಣ ಶಿವಯೋಗಿ ವಿರಚಿತ ‘ಕೈವಲ್ಯ ಪದ್ಧತಿ’ ಕುರಿತು ಕಾವ್ಯದ ಗಮಕ ವಾಚನ ಮಾಡಲಿದ್ದಾರೆ ಎಂದು ವಿವರಿಸಿದರು.