ಎಲಿಮುನ್ನೋಳಿ ಗ್ರಾಮದಲ್ಲಿ ಶಾಸಕ ನಿಖಿಲ ಕತ್ತಿ ಕೆರೆ ತುಂಬಿಸುವ ಕಾಮಗಾರಿ ಪರಿಶೀಲಿಸಿದರು. ಸತ್ಯಪ್ಪ ನಾಯಿಕ, ಗುರುರಾಜ ಕುಲಕರ್ಣಿ, ಪ್ರಶಾಂತ ಪಾಟೀಲ, ಕೆಂಪಣ್ಣ ವಾಸೇದಾರ ಇತರರಿದ್ದರು.
ಹುಕ್ಕೇರಿ: ನೀರಾವರಿ ಸೌಲಭ್ಯಕ್ಕೆ ಆಗ್ರಹಿಸಿ ರೈತ ಸಂಘಟನೆ ಮೇ 20ರಂದು ಹುಕ್ಕೇರಿ ಯಲ್ಲಿ ಕೈಗೊಳ್ಳಲಿರುವ ಪ್ರತಿಭಟನೆಗೆ ನನ್ನ ಬೆಂಬಲ ಇದ್ದು, ವೈಯಕ್ತಿಕವಾಗಿ ನಾನು ಪಾಲ್ಗೊಳ್ಳುತ್ತೇನೆ ಎಂದು ಶಾಸಕ ನಿಖಿಲ ಕತ್ತಿ ತಿಳಿಸಿದರು.
ತಾಲೂಕಿನ ಎಲಿಮುನ್ನೋಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಕ್ಕೇರಿ ಕ್ಷೇತ್ರದಲ್ಲಿ 41 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಶಸ್ವಿಯಾಗಿ ಪ್ರಾರಂಭಿಸಿದ್ದೇವೆ. ಜತೆಗೆ ಅಡವಿಸಿದ್ಧೇಶ್ವರ ಮತ್ತು ಶಂಕರಲಿಂಗ ಏತ ನೀರಾವರಿ ಯೋಜನೆ ಮುಕ್ತಾಯ ಹಂತದಲ್ಲಿದ್ದು ಶೀಘ್ರ ಲೋಕಾರ್ಪಣೆ ಮಾಡಲಿದ್ದೇವೆ.
ಹಿರಣ್ಯಕೇಶಿ ನದಿ ವರ್ಷಪೂರ್ತಿ ನೀರು ತುಂಬಿರುವಂತೆ ಮಾಡಲು ಸುಲ್ತಾನಪುರ, ಯರನಾಳ, ಬಡಕುಂದ್ರಿ, ಕೋಚರಿ ಮತ್ತು ಗೋಟೂರು ಬ್ಯಾರೇಜುಗಳಿಗೆ ನೀರು ತುಂಬಿಸುವ ಯೋಜನಾ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಅದು ಸಹ ಶೀಘ್ರ ಲೋಕಾರ್ಪಣೆ ಆಗಲಿದೆ. ಈ ಯೋಜನೆಗಳಿಂದ ಕ್ಷೇತ್ರದ ಶೇ.80ರಷ್ಟು ಪ್ರದೇಶ ನೀರಾವರಿಯಾಗಿದೆ ಎಂದು ಹೇಳಿದರು.
ಮಂಜೂರಾತಿಗೆ ಸರ್ಕಾರ ವಿಳಂಬ: ಕಣಗಲಾ, ಅಮ್ಮಣಗಿ ಮತ್ತು ಎಲಿಮುನ್ನೋಳಿ, ಯಾದಗೂಡ ಭಾಗದ 30 ಗ್ರಾಮಗಳ ರೈತರಿಗೆ ನೀರಾವರಿ ಒದಗಿಸಲು ಮಲ್ಲಿಕಾರ್ಜುನ ಏತ ನೀರಾವರಿ ಕ್ರಿಯಾ ಯೋಜನೆ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಇದು ಮಂಜೂರಾತಿ ಆದಲ್ಲಿ ಕ್ಷೇತ್ರ ಸಂಪೂರ್ಣ ನೀರಾವರಿ ಆಗುತ್ತದೆ. ಆದರೆ, ಸರ್ಕಾರ ಮಂಜೂರಾತಿ ನೀಡಲು ವಿಳಂಬ ಮಾಡುತ್ತಿದೆ. ರೈತರ ಪ್ರತಿಭಟನೆಯಿಂದ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಬಿಸಿ ಮುಟ್ಟಿ ಆದಷ್ಟು ಬೇಗ ಮಂಜೂರಾತಿ ದೊರಕುತ್ತದೆ ಎಂದರು.
ಮುಖಂಡರಾದ ಸತ್ಯಪ್ಪ ನಾಯಿಕ, ಗುರುರಾಜ ಕುಲಕರ್ಣಿ, ಪ್ರಶಾಂತ ಪಾಟೀಲ, ಕೆಂಪಣ್ಣ ವಾಸೇದಾರ, ಶಶಿಕಾಂತ ದೊಡ್ಡಲಿಂಗನವರ, ಭೀಮಗೌಡ ಗಿರಿಗೌಡನವರ, ಮಾರುತಿ ರಾಚನ್ನವರ, ಮಹಾಂತೇಶ ನಾಗನೂರಿ, ದುಂಡಪ್ಪ ಮಾಂಡೇಕರ, ಈರಣ್ಣ ಅಮ್ಮಣಗಿ, ಪ್ರಕಾಶ ಬೆನಿವಾಡ, ಶಂಕರ ಮರಡಿ, ಮಲ್ಲಪ್ಪ ಮರಡಿ, ಶಶಿಕಾಂತ ಬೋನಿ, ಬಾಹುಬಲಿ ಇಮಗೌಡನವರ ಇತರರಿದ್ದರು.