ಚಿಕ್ಕೋಡಿ ತಾಲೂಕಿನ ಕಾಡಸಿದ್ಧೇಶ್ವರ ಸಂಸ್ಥಾನ ಮಠದ ವೇದ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ರಿಕೆಟ್ ಸ್ಪರ್ಧೆಯನ್ನು ಶ್ರೀಶೈಲ ಶ್ರೀ ಉದ್ಘಾಟಿಸಿದರು. ವಿಶ್ವಾರಾಧ್ಯ ಹಿರೇಮಠ, ರೇಣುಕಾ ದೇವರು ಇತರರಿದ್ದರು. 
ಬೆಳಗಾವಿ

ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಸಹಾಯಕ

ಪ್ರಶಾಂತ ಹೂಗಾರ
ಮಾಂಜರಿ: ಇಂದಿನ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ಪಾಠಶಾಲೆ ಹಾಗೂ ಸಂಸ್ಕೃತ ಪಠ್ಯಕ್ರಮದ ಜತೆ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಮುಖ್ಯ ನೀಡುವುದು ಅವಶ್ಯ ಎಂದು ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.
ಯಡೂರ ಗ್ರಾಮದ ವೀರಭದ್ರ ಮತ್ತು ಭದ್ರಕಾಳಿ ದೇವರ ಕಲ್ಯಾಣ ಮಹಾಮಹೋತ್ಸವ, ರಾಜಗೋಪುರ ಲೋಕಾರ್ಪಣೆ, ಕೃಷ್ಣಾರತಿ ಹಾಗೂ ಪಾಠಶಾಲೆ ವಿದ್ಯಾರ್ಥಿಗಳ ದ್ವಾದಶ ವಾರ್ಷಿಕ ಸಮಾರಂಭದ, ಕ್ರಿಕೆಟ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆ ಜತೆ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ವ್ಯಕ್ತಿತ್ವ ವಿಕಸನಕ್ಕೂ ಕ್ರೀಡೆ ಸಹಕಾರಿ. ಅದೇ ರೀತಿ ಸೋಲನ್ನು ಸಹಜವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ವೇದ ಪಾಠಶಾಲೆ ಶ್ರೀಶೈಲ ಶಾಸಿ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಇಂದಿನ ಕಾರ್ಯಕ್ರಮ: ಮಾ.1ರಿಂದ 3ರವರೆಗೆ ಬೆಳಗ್ಗೆ 7 ಗಂಟೆಯಿಂದ ವೀರಶೈವಾಗಮೋಕ್ತ ಮಹಾಕುಂಭಾಭಿಷೇಕದ ಅಂಗವಾಗಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಕಾಶೀ ಮಹಾಪೀಠ ನೂತನ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ನೆರವೇರಿಸುವರು. ಸಂಜೆ 6 ಗಂಟೆಗೆ ಕಾಡಸಿದ್ಧೇಶ್ವರ ಸಂಸ್ಥಾನ ಮಠದ ವೇದಾಗಮ ಸಂಸ್ಕೃತ ಪಾಠಶಾಲೆ ವಿದ್ಯಾರ್ಥಿಗಳ ದ್ವಾದಶ ಸಂಸ್ಕೃತ ಸಮ್ಮೇಳನ ಆಯೋಜಿಸಲಾಗಿದೆ. ಕಾರ್ಮಿಕ ಸಚಿವ ಸಂತೋಷ ಲಾಡ್ ಉದ್ಘಾಟಿಸುವರು. ಶ್ರೀಶೈಲ ಶ್ರೀ, ಕಾಶಿಪೀಠದ ನೂತನ ಜಗದ್ಗುರು ಪಂಚಮ ಶಿವಲಿಂಗೇಶ್ವರ ಶ್ರೀ, ಕೊಟ್ಟೂರಿನ ಬಸವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಂಬಿಕಾ ನಗರದ ಈಶ್ವರ ಪಂಡಿತಾರಾಧ್ಯ ಸ್ವಾಮೀಜಿ ಅವರಿಗೆ ಶಿವಾಚಾರ್ಯ ಪ್ರಶಸ್ತಿ ಪ್ರದಾನ ಜರುಗುವುದು.