ಬೆಳಗಾವಿ :ಬೆಂಗಳೂರಿನಲ್ಲಿ 2024ರ ಫೆಬ್ರುವರಿ, ಜುಲೈ ಹಾಗೂ 2025 ರ ಮಾರ್ಚ್, ಆಗಸ್ಟ್‌ನಲ್ಲಿ ನಡೆಸಲಾದ ವಿಧಾನಸಭೆ ಅಧಿವೇಶನಗಳಲ್ಲಿ ನಿಯಮ ಬಾಹಿರವಾಗಿ ಸಚಿವರು, ಶಾಸಕರಿಗೆ ಉಚಿತ ಊಟ ನೀಡಲಾಗಿದ್ದು, ಇದಕ್ಕಾಗಿ ವೆಚ್ಚವಾಗಿರುವ 95.83 ಲಕ್ಷ ರೂ.ಗಳನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಜೇಬಿನಿಂದ ಪಾವತಿ ಮಾಡಿಸಬೇಕು. ಇಲ್ಲದೇ ಹೋದಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ, ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಎಚ್ಚರಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ವೆಚ್ಚ ಸರ್ಕಾರದ ಖಜಾನೆಗೆ ಪಾವತಿಯಾಗಬೇಕು. ಇಲ್ಲದೇ ಹೋದಲ್ಲಿ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟು ಮಾಡಿರುವ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಈಗಾಗಲೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರಿಗೂ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಅಧಿವೇಶನ ನಡೆಯುವ ಸಮಯದಲ್ಲಿ ಕಾರ್ಯ ಕಲಾಪಗಳಲ್ಲಿ ಭಾಗವಹಿಸುವ ಸದಸ್ಯರುಗಳಿಗೆ ಸರ್ಕಾರದಿಂದ ಉಚಿತವಾಗಿ ಊಟ-ಉಪಹಾರಗಳನ್ನು ಹಾಗೂ ಟೀ-ಕಾಫಿ ಮುಂತಾದವುಗಳನ್ನು ನೀಡಲು ನಿಯಮಾವಳಿಗಳಲ್ಲಿ ಅವಕಾಶವಿಲ್ಲವೆಂದು ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಮಾಹಿತಿ ಹಕ್ಕಿನಡಿ ಲಿಖಿತವಾಗಿ ತಿಳಿಸಿದ್ದಾರೆ. ಒಂದು ಊಟಕ್ಕೆ 650ರೂ. ರೂ.ಗಳು, ಉಪಹಾರಕ್ಕೆ 325ರೂ., ಲಘು ಉಪಹಾರಕ್ಕೆ 200. ಪ್ರತಿ ಕಪ್ ಕಾಫಿ/ಚಹಾಗೆ 50ರೂ.ಗಳಂತೆ ಹಣ ಪಾವತಿಸಿದ್ದಾರೆ. ಇದಕ್ಕಾಗಿಯೇ ಶಾಸಕರುಗಳಿಗೆ ಭತ್ಯೆ ಇರುತ್ತದೆ. ಅದರಲ್ಲೇ ಅವರು ಖರ್ಚು ಮಾಡಿ ಪಡೆಯಬೇಕಿರುತ್ತದೆ. ಈ ನಿಯಮ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲೂ ದಿನಭತ್ಯೆಗಳನ್ನು ಪಡೆಯುತ್ತಿರುವ ಶಾಸಕರುಗಳಿಗೆ ಸರ್ಕಾರದಿಂದಲೇ ಉಚಿತ ಊಟ-ಉಪಹಾರಗಳನ್ನು ನೀಡುತ್ತಿರುವುದನ್ನು ಪ್ರಶ್ನಿಸಿ ಧಾರವಾಡ ಹೈಕೋರ್ಟ್‌ನಲ್ಲಿ ದಾಖಲಿಸಲಾಗಿದ್ದ ಪ್ರಕರಣದಲ್ಲಿ ಈ ಹಿಂದೆಯೇ ಸರ್ಕಾರಕ್ಕೆ ನೋಟಿಸ್ ಜಾರಿಯಾಗಿದೆ. ಇದನ್ನು ಗಮನಿಸಿಯಾದರೂ ಅಧಿಕಾರಿಗಳು ಈ ವೆಚ್ಚ ಭರಿಸಬೇಕು. ಇಲ್ಲದೆ ಹೋದಲ್ಲಿ ಇದನ್ನು ಸಹ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುವುದಾಗಿ ಗಡಾದ ತಿಳಿಸಿದ್ದಾರೆ.