ತೆಲಸಂಗ: ಕುಟುಂಬ ಕಲಹಕ್ಕೆ ಸಂಬಂಧಿಸಿದಂತೆ, ಕೋಪಗೊಂಡ ಪತಿ ಭೀಮಾ ಬಾವಸಾಬ ಭೋಸ್ಲೆ (45) ಹೆಂಡತಿಯ ತವರುಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಮನೆಯಲ್ಲಿದ್ದ ಆರು ಜನ ಗಾಯಗೊಂಡ ಘಟನೆ ತೆಲಸಂಗ ಗ್ರಾಮದಲ್ಲಿ ಬುಧವಾರ ನಡೆದಿದೆ.
ಭೀಮಾ ಹಾಗೂ ಅವರ ಪತ್ನಿ ರಾಣಿ ನಡುವೆ ಮೇಲಿಂದ ಮೇಲೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ರಾಣಿಯನ್ನು ತವರುಮನೆಯವರು ಕರೆದುಕೊಂಡು ಹೋಗಿದ್ದರು. ಇದರಿಂದ ಸಿಟ್ಟಾದ ಭೀಮಾ ಬೀಗರ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಪರಿಣಾಮ ಮನೆಯಲ್ಲಿದ್ದ ಶಂಕರ ಸಾಳುಂಕೆ, ರಾಣಿ ಭೋಸಲೆ, ಕೃಷ್ಣಾ ಸಾಳುಂಕೆ, ಸಂಜು ಸಾಳುಂಕೆ, ಮನೋಹರ ಪಡತಾರೆ ಮತ್ತು ಅಂಕುಶ ಪಡತಾರೆ ಅವರಿಗೆ ಸುಟ್ಟ ಗಾಯಗಳಾಗಿವೆ. ಮನೆಯಲ್ಲಿದ್ದ ಕೆಲ ಸಾಮಗ್ರಿಗಳು ಸುಟ್ಟಿವೆ ಎಂದು ಪ್ರಕರಣ ದಾಖಲಿಸಿಕೊಂಡ ಐಗಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.