belagavi city corporation 
ಬೆಳಗಾವಿ

ಸ್ಮಾರ್ಟ್ ಸಿಟಿ ‘ಸಿಟೀಸ್-2’ ಯೋಜನೆ ಅತಂತ್ರ!

ಬೆಳಗಾವಿ :ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ನವೀನತೆ, ಏಕೀಕರಣ ಮತ್ತು ಸ್ಥಿರತೆಯತ್ತ ಹೂಡಿಕೆ ( ಸಿಟೀಸ್-2.0) ಯೋಜನೆ ಅನುದಾನ ಹಂಚಿಕೆ ಗೊಂದಲದಿಂದ ಸಂಕಷ್ಟಕ್ಕೆ ಸಿಲುಕಿದೆ!
ಹೌದು. ಮಹಾನಗರದಲ್ಲಿ ಹಸಿ ಮತ್ತು ಒಣ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಲು, ಕಸ ಮರ ಬಳಕೆ ಮಾಡಿಕೊಂಡು ಆದಾಯ ವೃದ್ಧಿಸಿಕೊಳ್ಳುವ ವಿನೂತನ ಯೋಜನೆಯಾದ ಸಿಟೀಸ್-2.0ಗೆ ರಾಜ್ಯದಲ್ಲಿಯೇ ಏಕೈಕ ಬೆಳಗಾವಿ ಮಹಾನಗರ ಪಾಲಿಕೆ ಆಯ್ಕೆಯಾಗಿದೆ. ಆದರೆ, ಯೋಜನೆಯ ಆರಂಭದ ಹಂತದಲ್ಲಿಯೇ ರಾಜ್ಯ ಸರ್ಕಾರ ಮತ್ತು ಮಹಾನಗರ ಪಾಲಿಕೆ ತನ್ನ ಪಾಲಿನ ಅನುದಾನ ನೀಡಲು ಹಿಂದೇಟು ಹಾಕಿದ್ದರಿಂದ ಯೋಜನೆ ಅನುಷ್ಠಾನ ಅತಂತ್ರವಾಗಿದೆ.
ಕೇಂದ್ರ, ರಾಜ್ಯ ಸರ್ಕಾರ ತಲಾ ಶೇ.40ರಷ್ಟು ಹಾಗೂ ಮಹಾನಗರ ಪಾಲಿಕೆ ಶೇ.20ರಷ್ಟು ಸಹಭಾಗಿತ್ವದಲ್ಲಿ 135 ಕೋಟಿ ರೂ. ವೆಚ್ಚದ ಸಿಟೀಸ್-2.0 ಯೋಜನೆ ಅನುಷ್ಠಾನಕ್ಕೆ ಸಿದ್ದಗೊಂಡಿದೆ. ಮೊದಲ ಹಂತದಲ್ಲಿ ಕೇಂದ್ರ ಸರ್ಕಾರ ತನ್ನ ಪಾಲಿನ 75 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕಾದರೆ ಬೆಳಗಾವಿ ಮಹಾನಗರ ಪಾಲಿಕೆ, ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ತನ್ನ ಪಾಲಿನ 18 ಕೋಟಿ ರೂ. ಬಿಡುಗಡೆ ಮಾಡಬೇಕು. ಆದರೆ, ಸರ್ಕಾರ, ಮಹಾನಗರ ಪಾಲಿಕೆ ನಡುವಿನ ಅನುದಾನ ಹಂಚಿಕೆ ಸಮಸ್ಯೆಗೆ ಮೂಲ ಕಾರಣ ಎನ್ನಲಾಗಿದೆ.
ಈಗಾಗಲೇ ಪಾಲಿಕೆ ಆಡಳಿತ ಮಂಡಳಿ ಶೇ.20ರಷ್ಟು ಅನುದಾನವನ್ನು ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.ಆದರೆ, ಸರ್ಕಾರವು ನಮ್ಮಿಂದ ಅನುದಾನ ಬಿಡುಗಡೆ ಮಾಡಲು ಸಾಧ್ಯವಿಲ್ಲ. ನಿಮ್ಮ ಸ್ಥಳೀಯ ಮಟ್ಟದ ತೆರಿಗೆ ಆದಾಯದಲ್ಲಿಯೇ ಸಿಟೀಸ್-2.0 ಯೋಜನೆಗೆ 18 ಕೋಟಿ ರೂ. ಅನುದಾನ ನೀಡಬೇಕು ಎಂದು ನಿರ್ದೇಶನ ನೀಡಿದೆ. ಇದರಿಂದಾಗಿ ಪಾಲಿಕೆಯು ಅನುದಾನ ಕೊರತೆಯಿಂದ ಯೋಜನೆಗೆ ಹಣ ನೀಡಲು ಮೀನಾಮೇಷ ಎನಿಸುತ್ತಿದೆ.
ಬೆಳಗಾವಿ ನಗರದಲ್ಲಿ ಸಿಟೀಸ್-2.0 ಯೋಜನೆ ಅಡಿಯಲ್ಲಿ ವಿನೂತನ ತಂತ್ರಜ್ಞಾನಗಳನ್ನು ಒಳಗೊಂಡಿರುವ ಹೈಟೆಕ್ ಯಂತ್ರೋಪಕರಣಗಳು, 50ಕ್ಕೂ ಅಧಿಕ ಕಸ ಸಂಗ್ರಹದ ವಾಹನಗಳು, 100ಕ್ಕೂ ಅಧಿಕಾರಿ, ಸಿಬ್ಬಂದಿ ನೇಮಕ, ಹಸಿ ಮತ್ತು ಒಣ ಕಸ ಪ್ರತ್ಯೇಕಿಸುವ ಎರಡು ವಾಹನ ಹೀಗೆ ಯೋಜನೆ ಸಮಗ್ರ ವರದಿಯನ್ನು ಟಾಟಾ ಕನ್ಸಲ್‌ಟೆಂಟನ್ಸಿ ಕಂಪನಿಯು ವರದಿ ಸಲ್ಲಿಸಿದೆ. ಈ ವರದಿಯ ಆಧಾರದ ಮೇಲೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ರಾಜ್ಯದ ಪಾಲಿನ ಅನುದಾನ ಬಿಡುಗಡೆ ಆಗದಿರುವ ಹಿನ್ನೆಲೆ ಯೋಜನೆ ಆರಂಭಕ್ಕೆ ವಿಳಂಬವಾಗಿದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
............
ಕೋಟ್ಸ್
ಕೇಂದ್ರದ ಸಿಟೀಸ್-2.0 ಯೋಜನೆಗೆ ಬೆಳಗಾವಿ ನಗರ ಆಯ್ಕೆಯಾಗಿದ್ದು, ರಾಜ್ಯ ಸರ್ಕಾರ ಅಥವಾ ಮಹಾನಗರ ಪಾಲಿಕೆ ತನ್ನ ಪಾಲಿನ 18 ಕೋಟಿ ರೂ. ಅನುದಾನ ನೀಡಿದರೆ ಕೇಂದ್ರದಿಂದ 75 ಕೋಟಿ ರೂ. ಬಿಡುಗಡೆ ಆಗುತ್ತದೆ. ಆದರೆ, ರಾಜ್ಯ ತನ್ನ ಪಾಲಿನ ಅನುದಾನ ನೀಡಿಲ್ಲ. ಜ.28ರಂದು ಜರುಗಲಿರುವ ಸಿಟೀಸ್-2.0 ಯೋಜನೆ ಸಭೆಯ ಮುನ್ನವೇ ಹಣ ಸಂದಾಯ ಮಾಡಬೇಕು. ಇಲ್ಲದಿದ್ದರೆ ಯೋಜನೆ ವಾಪಸ್ ಹೋಗುವ ಸಾಧ್ಯತೆಯಿದೆ.
- ಕವಿತಾ.ಎಂ. ವಾರಂಗಲ್, ವ್ಯವಸ್ಥಾಪಕ ನಿರ್ದೇಶಕಿ,ಸ್ಮಾರ್ಟ್ ಸಿಟಿ
...............
ಕೋಟ್ಸ್
ಈಗಾಗಲೇ ಸಿಟೀಸ್-2.0 ಯೋಜನೆಗೆ ಅನುದಾನ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಹಾನಗರ ಪಾಲಿಕೆಯು ತನ್ನ ಪಾಲಿನ ಅನುದಾನ ನೀಡಲು ಸಿದ್ದವಿದೆ. ಆದರೆ, ಸರ್ಕಾರ ಅನುದಾನ ಬಿಡುಗಡೆ ಮಾಡದಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ.
-ಕಾರ್ತಿಕ್.ಎಂ. ಪಾಲಿಕೆ ಆಯುಕ್ತ