ಬೆಳಗಾವಿ ಪಾಲಿಕೆಯಲ್ಲಿ ಗುರುವಾರ ನಗರ ಸೇವಕರಿಗಾಗಿ ಹಮ್ಮಿಕೊಂಡಿದ್ದ ಎಸ್‌ಐಆರ್ ಮಾಹಿತಿ ಕಾರ್ಯಾಗಾರದಲ್ಲಿ ಸಿದ್ದು ಹುಲ್ಲೋಳಿ, ಪ್ರೀತಿ ಕಾಮಕರ, ಹನುಮಂತ ಕೊಂಗಾಲಿ, ಕಾರ್ತಿಕ ಎಂ. ಇತರರಿದ್ದರು. 
ಬೆಳಗಾವಿ

ಎಸ್‌ಐಆರ್ ಯಶಸ್ಸಿಗೆ ಸದಸ್ಯರ ಸಹಕಾರ ಅಗತ್ಯ

ಬೆಳಗಾವಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಆರಂಭವಾಗಲಿದ್ದು, ಇದರ ಯಶಸ್ಸಿಗೆ ನಗರ ಸೇವಕರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಎಸ್‌ಐಆರ್ ಬಗ್ಗೆ ತಮ್ಮ ವಾರ್ಡ್‌ಗಳಲ್ಲಿ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಪಾಲಿಕೆ ಆಯುಕ್ತ ಕಾರ್ತಿಕ ಎಂ. ಮನವಿ ಮಾಡಿದರು.
ಪಾಲಿಕೆಯಲ್ಲಿ ಗುರುವಾರ ನಗರ ಸೇವಕರಿಗಾಗಿ ಏರ್ಪಡಿಸಿದ್ದ ಎಸ್‌ಐಆರ್ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿ. 40 ಮೇಲ್ವಿಚಾರಕರ ಮಾರ್ಗದರ್ಶನದಲ್ಲಿ ಉತ್ತರ, ದಕ್ಷಿಣ ಸೇರಿ 514 ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸುವರು. ಈಗಾಗಲೇ ಉತ್ತರದಲ್ಲಿ ಶೇ.75, ದಕ್ಷಿಣದಲ್ಲಿ ಶೇ.85ರಷ್ಟು ಮ್ಯಾಪಿಂಗ್ ಮುಗಿದಿದೆ ಎಂದರು.
ಜೂ.30ರಿಂದ ಜು.29ರವರೆಗೆ ಎಲ್ಲ ಮತಗಟ್ಟೆ ಅಧಿಕಾರಿಗಳು ಮನೆ ಮನೆ ಸಮೀಕ್ಷೆ ನಡೆಸುವರು. ಬೂತ್ ಮಟ್ಟದ ಅಧಿಕಾರಿಗಳು ಗಣತಿ ನಮೂನೆಗಳ ವಿತರಣೆ ಮತ್ತು ಸಂಗ್ರಹಕ್ಕಾಗಿ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಇವರಿಗೆ ನಗರ ಸೇವಕರು ಸಹಕರಿಸಬೇಕು ಎಂದರು.
ಕಂದಾಯ ವಿಭಾಗದ ಉಪ ಆಯುಕ್ತ ಡಾ.ಸಿದ್ದು ಹುಲ್ಲೋಳಿ ಎಸ್‌ಐಆರ್ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಮೇಯರ್ ಪ್ರೀತಿ ಕಾಮಕರ, ಉಪ ಮೇಯರ್ ಹನುಮಂತ ಕೊಂಗಾಲಿ, ಆಡಳಿತ ಪಕ್ಷದ ನಾಯಕ ಸಂತೋಷ ಪೆಡ್ನೇಕರ, ವಿಪಕ್ಷ ನಾಯಕ ಮೊಹಮ್ಮದ್ ಸೋಹೈಲ್ ಸಂಗೊಳ್ಳಿ, ಪರಿಷತ್ ಕಾರ್ಯದರ್ಶಿ ಲಕ್ಷ್ಮೀ ನಿಪ್ಪಾಣಿಕರ, ಆಡಳಿತ ವಿಭಾಗದ ಉಪ ಆಯುಕ್ತ ಉದಯಕುಮಾರ ಟಿ. ಇತರರಿದ್ದರು.