ಪ್ರಧಾನ ಮಂತ್ರಿ ಮಾನ್-ಧನ್ ವಂತಿಗೆ ಆಧಾರಿತ ಪಿಂಚಣಿ ಯೋಜನೆ ಕುರಿತು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಂಗಳವಾರ ಸಭೆ ನಡೆಸಿದರು.  
ಬೆಳಗಾವಿ

ಶ್ರಮಯೋಗಿ ಮಾನ್-ಧನ್ ನೋಂದಣಿ ಅಭಿಯಾನ ಆರಂಭ

ಡಿ.ವಿ. ಕಮ್ಮಾರ
ಬೆಳಗಾವಿ: ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಮಾನ್-ಧನ್ ವಂತಿಗೆ ಆಧಾರಿತ ಪಿಂಚಣಿಗೆ ಅರ್ಹರನ್ನು ಗುರುತಿಸಿ ಸೇರಿಸಲು ಮುಂದಾಗುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಯೋಜನೆಯ ನೋಂದಣಿ ಅಭಿಯಾನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ ಕಾರ್ಮಿಕರು, ಮನರೇಗಾ ಕೂಲಿ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಅಕ್ಷರ ದಾಸೋಹ ಅಡುಗೆ ಸಹಾಯಕರು, ಬೀದಿ ಬದಿ ವ್ಯಾಪಾರಸ್ಥರು, ಕೌಶಲಾಧಾರಿತ ಕಾರ್ಮಿಕರನ್ನು ಗುರುತಿಸಿ ನೋಂದಣಿ ಮಾಡಿಸಬೇಕು ಎಂದು ತಿಳಿಸಿದರು.
ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ.ನಾಗರಾಜ ಮಾತನಾಡಿ, ಮಾಸಿಕ 3,000ರೂ. ನಿಶ್ಚಿತ ಪಿಂಚಣಿ ಒದಗಿಸುವ ಈ ಯೋಜನೆಗೆ 18 ರಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ಸಿ.ಎಸ್.ಸಿ. ಸೇವಾ ಕೇಂದ್ರಗಳಲ್ಲಿ ಆಧಾರ ಕಾರ್ಡ್ ಹಾಗೂ ಆರಂಭಿಕ ಶುಲ್ಕ ಪಾವತಿ ನೋಂದಣಿ ಮಾಡಿಕೊಳ್ಳಬಹುದು ಎಂದು ವಿವರಿಸಿದರು.
ಜಿಪಂ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಜಂಟಿ ಕೃಷಿ ನಿರ್ದೆಶಕ ಎಚ್.ಡಿ.ಕೊಳೆಕರ, ಜಿಲ್ಲಾ ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಜೋಗುರ, ರಾಜೇಶ ಜಾಧವ, ಕಾರ್ಮಿಕ ನೀರಿಕ್ಷಕರು ಸೇರಿದಂತೆ ಜಿಲ್ಲೆಯ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿದ್ದರು.
ಅರ್ಹರು:
ಗೃಹ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಬಿಸಿಯೂಟ ತಯಾರಕರು, ಹಮಾಲಿಗಳು, ಇಟ್ಟಿಗೆ ಕಾರ್ಮಿಕರು, ಭಟ್ಟಿ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆಗೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಚರ್ಮೋದ್ಯಮ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು, ಮೆಕ್ಯಾನಿಕ್ ಮತ್ತು ಕೈಮಗ್ಗ ಕಾರ್ಮಿಕರು ನೋಂದಾಯಿಸಿಕೊಳ್ಳುಬಹುದು.
----