ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದಲ್ಲಿ ಹಮ್ಮಿಕೊಂಡಿದ್ದ ಡಾ.ಶಿವಬಸವ ಸ್ವಾಮೀಜಿ ಜಯಂತಿಯಲ್ಲಿ ಶ್ರೀಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ದೀಪ ಬೆಳಗಿದರು. ಶ್ರೀ ಗುರುಸಿದ್ಧ ಪಟ್ಟದಾರ್ಯರು, ಡಾ.ಅಲ್ಲಮಪ್ರಭು ಸ್ವಾಮೀಜಿ, ಶ್ರೀ ಬಸವಾನಂದ ಸ್ವಾಮೀಜಿ ಇದ್ದರು.
- ಮಡಿವಾಳ ರಾಜಯೋಗೀಂದ್ರ ಶ್ರೀ ಹೇಳಿಕೆ
- ಜಯಂತಿ ಮಹೋತ್ಸವದ ಪ್ರವಚನ
ಬೆಳಗಾವಿ: ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಶಿವಬಸವ ಸ್ವಾಮೀಜಿ ಭಾಗ್ಯಗಳಿಲ್ಲದ ಕಾಲದಲ್ಲಿ ಬಡವರಿಗೆ ಪಾಲಿಗೆ ಭಾಗ್ಯದೇವತೆಯಾಗಿ, ಲಕ್ಷಾಂತರ ಬಡ ವಿದ್ಯಾರ್ಥಿಗಳ ಜೀವನ ಉದ್ಧಾರ ಮಾಡಿದ್ದಾರೆ ಎಂದು ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಶ್ರೀಮಡಿವಾಳ ರಾಜ ಯೋಗೀಂದ್ರ ಸ್ವಾಮೀಜಿ ಹೇಳಿದರು.
ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಶನಿವಾರ ಏರ್ಪಡಿಸಿದ್ದ ಲಿಂಗೈಕ್ಯ ಡಾ.ಶಿವಬಸವ ಮಹಾಸ್ವಾಮೀಜಿ 136ನೇ ಜಯಂತಿ ಮಹೋತ್ಸವದ ಪ್ರಯುಕ್ತ ಏರ್ಪಡಿಸಿರುವ ಪ್ರವಚನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಶಿವಬಸವ ಶ್ರೀಗಳು ಬೆಳಗಾವಿಗೆ ಆಕಾಶದೀಪವಾಗಿ ಸಾಧಕರಿಗೆ, ಸನ್ಯಾಸಿಗಳಿಗೆ ಆಶ್ರಯ ನೀಡಿ ಮಾರ್ಗದರ್ಶನ ಮಾಡಿದ್ದಾರೆ ಎಂದರು.
ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಶಿವಬಸವ ಶ್ರೀಗಳನ್ನು ಸ್ವಾತಂತ್ರೃ ಹೋರಾಟಗಾರರಿಗೆ ಆಶ್ರಯ ನೀಡಿ ಸಹಾಯ ಮಾಡಿದ್ದಕ್ಕಾಗಿ ಬಂಧಿಸಲು ಬ್ರಿಟಿಷರು ಮುಂದಾಗಿದ್ದರು. ಆಗ ಹಲವು ತಿಂಗಳು ಅವರು, ಕೆಳದಿ ಮಠದಲ್ಲಿ ಆಶ್ರಯ ಪಡೆದಿದ್ದರು. ಅಂದು ಅವರು 25 ವಿದ್ಯಾರ್ಥಿಗಳಿಂದ ಆರಂಭಿಸಿದ್ದ ಸಂಸ್ಥೆಯಲ್ಲಿ ಈಗ 25,000 ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದರು.
ಗುಳೇದಗುಡ್ಡ ಗುರುಸಿದ್ದೇಶ್ವರ ಬೃಹನ್ ಮಠದ ಶ್ರೀ ಗುರುಸಿದ್ಧ ಪಟ್ಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಮ್ಮಿಗಟ್ಟಿ ಬಸವ ಯೋಗಾಶ್ರಮದ ಶ್ರೀ ಬಸವಾನಂದ ಸ್ವಾಮೀಜಿ ಪ್ರಸ್ತುತಪಡಿಸಿದ ಪ್ರವಚನಕ್ಕೆ ಗದಗ ವೀರೇಶ್ವರ ಪುಣ್ಯಾಶ್ರಮದ ವೀರೇಶ ಮಳಲಿ ಮತ್ತು ಸದಾಶಿವ ಹಿಪ್ಪರಗಿ ಸಂಗೀತದ ಸಾಥ್ ನೀಡಿದರು.
ಮೆರವಣಿಗೆ: ಸಮಾರಂಭಕ್ಕೂ ಮುಂಚೆ ಡಾ.ಶಿವಬಸವ ಶ್ರೀಗಳ ಭಾವಚಿತ್ರ ಹಾಗೂ ವಚನಕಟ್ಟುಗಳ ಮೆರವಣಿಗೆ ಶ್ರೀನಗರ ಉದ್ಯಾನದಿಂದ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್‌ವರೆಗೆ ಜರುಗಿತು. ಮೆರವಣಿಗೆಯಲ್ಲಿ 20ಕ್ಕೂ ಹೆಚ್ಚು ಮಠಾಧೀಶರು, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಹಾಗೂ ಪದಾಧಿಕಾರಿಗಳು, ಬಸವಪರ ಸಂಘಟನೆಗಳ ಸದಸ್ಯರು, ವಿವಿಧ ಮಹಿಳಾ ಮಂಡಳಗಳ ಸದಸ್ಯರಿದ್ದರು.
ಎ.ಕೆ.ಪಾಟೀಲ ಮತ್ತು ರಾಜಶೇಖರ ಪಾಟೀಲ ನಿರೂಪಿಸಿದರು. ಚಂದ್ರಗಿರಿ ಮಹಿಳಾ ವಿದ್ಯಾಲಯದ ಪ್ರಾಚಾರ್ಯ ಡಾ.ಎ.ಎಲ್.ಪಾಟೀಲ ಸ್ವಾಗತಿಸಿದರು. ರಾಜಶೇಖರ ಪಾಟೀಲ ವಂದಿಸಿದರು.