ಪೊಲೀಸ್ ಆಯುಕ್ತರ ಕಚೇರಿ ಪಕ್ಕ ಚರಂಡಿ ನೀರು..
ನಗರದ ಪೊಲೀಸ್ ಆಯುಕ್ತರ ಕಚೇರಿಗೆ ಹೋಗುವ ಪ್ರಮುಖ ರಸ್ತೆಯಲ್ಲಿ ಒಳಚರಂಡಿ ಗಲೀಜು ನೀರು ಆವರಿಸಿಕೊಂಡಿದೆ. ರಸ್ತೆ ಮಧ್ಯ ಮ್ಯಾನ್‌ಹೋಲ್ ಇದ್ದು, ಅದರ ಮುಚ್ಚಳದ ಸಂಧಿಗಳಿಂದ ಗಲೀಜು ನೀರು ಮೇಲಕ್ಕೆ ಬಂದು, ಗಬ್ಬು ವಾಸನೆ ಹರಡಿದೆ.
ಕಳೆದೊಂದು ವಾರದಿಂದ ಸಮಸ್ಯೆ ಉದ್ಭವಿಸಿದೆ. ಪೊಲೀಸ್ ಆಯುಕ್ತರು ಸೇರಿ ಪ್ರಮುಖ ಅಧಿಕಾರಿಗಳು ಓಡಾಡುವ ರಸ್ತೆ ಸ್ಥಿತಿಯೇ ಹೀಗಾಗಿದೆ. ಆರ್‌ಎಲ್‌ಎಸ್ ಕಾಲೇಜಿನ ಪ್ರವೇಶ ದ್ವಾರದ ಬಳಿ ಕಾಮಗಾರಿಗಾಗಿ ಗುಂಡಿ ತೋಡಿ, ಹಾಗೆ ಬಿಟ್ಟಿದ್ದು, ಇದರ ಸಮೀಪದಲ್ಲೇ ಗಲೀಜು ನೀರು ಹೊರಚಿಮ್ಮುತ್ತಿದೆ. ಈ ಮಾರ್ಗದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯವೂ ಓಡಾಡುತ್ತಾರೆ. ಇದರ ಮೇಲೆ ವಾಹನಗಳು ಓಡಾಡುವಾಗ ನೀರು ಚಿಮ್ಮುತ್ತಿದೆ. ಅಲ್ಲದೆ, ಪೊಲೀಸ್ ಕ್ವಾರ್ಟರ್ಸ್ ಸಹ ಇಲ್ಲಿಯೇ ಇದ್ದು, ಪೊಲೀಸ್ ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರು ಇಲ್ಲಿಯೇ ಓಡಾಡುತ್ತಿದ್ದು, ಈ ಬಗ್ಗೆ ನೋವು ತೋಡಿಕೊಳ್ಳಲಾರದ ಸ್ಥಿತಿಯಲ್ಲಿದ್ದಾರೆ.