ಬೆಳಗಾವಿ ನಗರದ ಪುಲ್ಭಾಗಗಲ್ಲಿ ಸುತ್ತಮುತ್ತಲಿನ ನ್ಯಾಯಬೆಲೆ ಅಂಗಡಿಗಳ ಎದುರಿನಲ್ಲಿ ಪಡಿತರಕ್ಕಾಗಿ ಜನರು ಸರತಿಯಲ್ಲಿ ನಿಂತಿರುವುದು. 
ಬೆಳಗಾವಿ

ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ!

ಅರ್ಚನಾ ಜಾಧವ

ಪ್ರಮುಖ ಮುಖ್ಯಾಂಶಗಳು

  • ಪಡಿತರಅಂಗಡಿಗಳ ಎದುರು ದಿನಗಟ್ಟಲೇ ಕಾಯುವ ಶಿಕ್ಷೆ
  • ಹೈರಾಣಾದ ಜನರು
ಬೆಳಗಾವಿ: ಜಿಲ್ಲಾದ್ಯಂತ ನ್ಯಾಯಬೆಲೆ ಅಂಡಿಗಳಲ್ಲಿ ತಾಂತ್ರಿಕ ದೋಷದಿಂದಾಗಿ ಪಡಿತರ ಪಡೆಯಲು ಲಾನುಭವಿಗಳು ದಿನಗಟ್ಟಲೇ ಕೇಂದ್ರಗಳ ಮುಂದೆ ಕಾಯಬೇಕಾಗಿದೆ. ಕೆಲ ಪಡಿತರ ಚೀಟಿದಾರರು ಅಕ್ಕಿ ಇಲ್ಲದೆ ಮರಳಿ ಹೋಗುತ್ತಿರುವುದು ಕಂಡು ಬಂತು. ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ನ.1ರೊಳಗೆ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಸರಬರಾಜು ಮಾಡುವ ಬದಲು ನ.15ರ ನಂತರ ವಿತರಿಸಿದೆ.
ಈ ನಡುವೆ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿದಾರರು ದಿನಗಟ್ಟಲೇ ಕಾದು ಕುಳಿತರೂ ಅಕ್ಕಿ ಸಿಗುತ್ತಿಲ್ಲ. ನ.30ರೊಳಗೆ ಲಾನುಭವಿಗಳಿಗೆ ಪಡಿತರ ವಿತರಿಸಬೇಕು. ಆದರೆ, ಸರ್ವರ್ ಸಮಸ್ಯೆಯಿಂದಾಗಿ ಶೇ.60 ಜನರಿಗೆ ಪಡಿತರ ಮುಟ್ಟಿಲ್ಲ. ಕಳೆದ ನಾಲ್ಕೈದು ತಿಂಗಳಿಂದ ಅನ್ನಭಾಗ್ಯ ಯೋಜನೆಯಡಿ ಪಡಿತರ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ.

ತಿಂಗಳ ಮೊದಲ ವಾರದಲ್ಲಿ ನೀಡಬೇಕಾಗಿದ್ದ ಪಡಿತರ ತಿಂಗಳ ಕೊನೆಗೆ ನೀಡುತ್ತಿದ್ದಾರೆ. ಅದೂ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಮಾತ್ರ ಸಿಗುತ್ತಿದೆ. ರಾಜ್ಯ ಸರ್ಕಾರದಿಂದ 5 ಕೆಜಿ ಅಕ್ಕಿ ಬದಲಾಗಿ ನೀಡುತ್ತಿರುವ ಹಣ ಕೂಡ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿಲ್ಲ. ಈ ಕುರಿತು ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಕೇಂದ್ರ ಸರ್ಕಾರ ತನ್ನ ಪಾಲಿನ 5 ಕೆಜಿ ಅಕ್ಕಿ ನೀಡುತ್ತಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಅಕ್ಕಿಯನ್ನು ಖರೀದಿಸಿ ನೀಡುವಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ ಪಡಿತರ ವಿತರಣೆ ತಡವಾಗುತ್ತಿದೆ. ಇಲಾಖೆ ಅಧಿಕಾರಿಗಳೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ನ್ಯಾಯಬೆಲೆ ಅಂಗಡಿಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"

ಜಿಲ್ಲೆಯಲ್ಲಿ ಪಡಿತರ ಧಾನ್ಯ ವಿತರಣೆಗೆ ಸರ್ವರ್ ಸಮಸ್ಯೆ ಉಂಟಾಗಿರುವ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೂಡಲೆ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದ್ದಾರೆ. ಈ ಬಾರಿ ಅನ್ನಭಾಗ್ಯ ಅಕ್ಕಿ ವಿತರಣೆ ವಿಳಂಬವಾಗಿರುವುದರಿಂದ ಪಡಿತರದಾರರಿಗೆ ತೊಂದರೆಯಾಗಿದೆ.

ಸರ್ಕಾರ ಸಮಯಕ್ಕೆ ಸರಿಯಾಗಿ ಪಡಿತರ ವಿತರಿಸುತ್ತಿಲ್ಲ. ಸರ್ವರ್ ಸಮಸ್ಯೆಯಿಂದಾಗಿ ಜನರಿಗೆ ಸರಿಯಾಗಿ ಪಡಿತರ ನೀಡುವುದು ಕಷ್ಟವಾಗುತ್ತಿದೆ. ಅಂಗಡಿಕಾರರಿಗೆ 7 ತಿಂಗಳಿಂದ ಕಮಿಷನ್ ನೀಡುತ್ತಿಲ್ಲ. ಇದೀಗ ಥರ್ಮಲ್ ಪ್ರಿಟಿಂಗ್ ಖರೀದಿಸಿದರೆ ಮಾತ್ರ ಕಮಿಷನ್ ನೀಡುತ್ತೇವೆಂದು ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ.