ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಪಡಿತರದಾರರು ಸರತಿಯಲ್ಲಿ ಕಾಯುತ್ತಿರುವುದು.
ಬೆಳಗಾವಿ/ಬೈಲಹೊಂಗಲ: ಆಗಷ್ಟ್ ಮುಗಿಯಲು ಕೊನೆ ಮುಗಿಯಲು ಒಂದೇ ದಿನ ಬಾಕಿ ಇದ್ದರೂ ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಉದ್ಭವಿಸಿರುವ ಸರ್ವರ್ ಸಮಸ್ಯೆ ಕೊನೆಗೊಂಡಿಲ್ಲ. ಪರಿಣಾಮ, ಭಾನುವಾರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಜನ ಕೆವೈಸಿ ಮಾಡಿಸಲು ಹಾಗೂ ಬಯೋಮೆಟ್ರಿಕ್ ಮಾಡಿ ಪಡಿತರ ಪಡೆಯಲು ಮುಗಿಬಿದ್ದಿದ್ದರು. ಸರ್ವರ್ ಸಮಸ್ಯೆ ಕಾರಣಕ್ಕೆ ರಾತ್ರಿವರೆಗೂ ಸರತಿ ಸಾಲಿನಲ್ಲಿ ಕಾದು ನಿರಾಸೆಯಿಂದ ಮರಳಬೇಕಾಯಿತು. ಸೋಮವಾರ ಈ ತಿಂಗಳ ಪಡಿತರ ಪಡೆಯಲು ಕೊನೆಯ ದಿನವಾಗಿದ್ದು, ಲಾನುಭವಿಗಳು ಪಡಿತರದಿಂದ ವಂಚಿತರಾಗುವ ಆತಂಕ ಎದುರಾಗಿದೆ.
ಭಾನುವಾರ ಯರಗಟ್ಟಿ ತಾಲೂಕಿನ ಮುಗಳಿಹಾಳ, ಗೋಕಾಕ ತಾಲೂಕಿನ ಕೊಣ್ಣೂರ, ಹುಕ್ಕೇರಿ ತಾಲೂಕಿನ ಪಾಶ್ಚಾಪುರ, ಬೈಲಹೊಂಗಲ ತಾಲೂಕಿನ ಬೆಳವಡಿ, ಸಂಪಗಾಂವ, ನೇಸರಗಿ, ಮುರಗೋಡ ಗ್ರಾಮಗಳು ಸೇರಿದಂತೆ ವಿವಿಧೆಡೆ ಕೆವೈಸಿ ಮಾಡಿಸಲು ನೂಕುನುಗ್ಗಲು ಉಂಟಾಗಿದೆ. ಕೆಲ ಲಾನುಭವಿಗಳು ನಸುಕಿನ ಜಾವ 5ರಿಂದ ಪಡಿತರ ಅಂಗಡಿ ಎದುರು ಸರತಿಯಲ್ಲಿ ನಿಂತಿದ್ದರು. ಇನ್ನೂ ಕೆಲವರು ರಾತ್ರಿ 10ರವರೆಗೂ ಕಾದು ಮನೆಗೆ ಮರಳಿದ್ದಾರೆ. ಲಾನುಭವಿಗಳು 2 ಬಾರಿ ಬಯೋಮೆಟ್ರಿಕ್ ನೀಡಬೇಕಿದ್ದು, ಈ ವೇಳೆಯಲ್ಲೇ ಸರ್ವರ್ ಕೈಕೊಡುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ.
"
ವಾರಗಟ್ಟಲೇ ಕೂಲಿ ಬಿಟ್ಟು ಪಡಿತರಕ್ಕಾಗಿ ಕಾದಿದ್ದೆವು. ಸರ್ವರ್ ಸಮಸ್ಯೆಯಿಂದ ಪಡಿತರವೂ ಇಲ್ಲ, ಕೆಲಸವೂ ಇಲ್ಲದಂತಾಗಿದೆ. ಸೋಮವಾರವೂ ಪಡಿತರಕ್ಕಾಗಿ ಪರದಾಡಬೇಕಿದ್ದು, ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
— ಗುಂಡಪ್ಪ ಸನದಿ ಪಡಿತರ ಲಾನುಭವಿ, ಬೈಲಹೊಂಗಲ