ಅಂಕಲಿ ಗೋಮಟೇಶ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಅಧ್ಯಕ್ಷ ಎನ್.ಎ.ಮಗದುಮ್ಮ, ಡಾ.ಹರ್ಷವರ್ಧನ ಮಗದುಮ್ಮ, ಪ್ರಾಚಾರ್ಯರಾದ ಎನ್.ಎಸ್.ನಿಡಗುಂದಿ, ಎನ್.ಸಾಗರ, ಹಜರತ್‌ಅಲಿ ಪನಾರಿ, ಸುರೇಶ ಎನ್. ಇತರರಿದ್ದರು. 
ಬೆಳಗಾವಿ

೫೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

ಮಾಂಜರಿ: ಅಂಕಲಿ ಗ್ರಾಮದ ಗೋಮಟೇಶ ಶಿಕ್ಷಣ ಸಂಸ್ಥೆಯ ಡಾ.ಎನ್.ಎ.ಮಗದುಮ್ಮ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯಕ್ಕೆ ೨೦೨೬-೨೭ನೇ ಶೈಕ್ಷಣಿಕ ವರ್ಷದಿಂದ ಅನುಮತಿ ದೊರೆತಿದ್ದು, ಈ ಬಾರಿ ೫೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕ ಡಾ.ಎನ್.ಎ.ಮಗುದುಮ್ಮ ಹೇಳಿದರು.
ಸಂಸ್ಥೆಯ ಡಾ.ಎನ್.ಎ.ಮಗದುಮ್ಮ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಯ ಜತೆಗೆ ನಮ್ಮ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪರೀಕ್ಷೆ ನಡೆಸಲಾಗುವುದು ಎಂದರು.
ಒಂದರಿಂದ ಹತ್ತನೇ ರ‍್ಯಾಂಕ್ ಪಡೆಯುವ ಪ್ರತಿ ವಿದ್ಯಾರ್ಥಿಗೆ ೭೦,೦೦೦ ರೂ., ೧೧ರಿಂದ ೨೦ನೇ ರ‍್ಯಾಂಕ್ ಪಡೆಯುವ ವಿದ್ಯಾರ್ಥಿಗಳಿಗೆ ೬೦,೦೦೦ ರೂ., ೨೧ರಿಂದ ೫೦ ರ‍್ಯಾಂಕ್ ಪಡೆಯುವ ವಿದ್ಯಾರ್ಥಿಗಳಿಗೆ ೫೦,೦೦೦ ರೂ. ವಿದ್ಯಾರ್ಥಿವೇತನ ನೀಡಲಾಗುವುದು. ಪರೀಕ್ಷೆಗೆ ಏ.೫ ಕೊನೆಯ ದಿನ, ಏ.೪ರ ಒಳಗೆ ನೋಂದಣಿ ಮಾಡಿಕೊಳ್ಳಬೇಕು ಎಂದರು.
ಸಂಸ್ಥೆಯ ಉಪಾಧ್ಯಕ್ಷ ಡಾ.ಹರ್ಷವರ್ಧನ ಮಗದುಮ್ಮ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗೆ ಉನ್ನತ ಶಿಕ್ಷಣದ ಮೊದಲ ಹಂತವಾಗಿರುವ ಪದವಿಪೂರ್ವ ಕಾಲೇಜು ಅತ್ಯಂತ ಮುಖ್ಯ. ಇದಕ್ಕಾಗಿ, ಗೋಮಟೇಶ ಶಿಕ್ಷಣ ಸಂಸ್ಥೆಯು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಈ ಸೌಲಭ್ಯ ಬಳಸಿಕೊಳ್ಳುವಂತೆ ಕರೆ ನೀಡಿದರು.
ಪ್ರಾಂಶುಪಾಲ ಎನ್.ಸಾಗರ ಮಾತನಾಡಿದರು. ಪ್ರಾಂಶುಪಾಲ ಎಂ.ಎಸ್.ನಿಡುಗುಂದಿ, ಶುಶ್ರೂಷ ಮಹಾವಿದ್ಯಾಲಯ ಪ್ರಾಚಾರ್ಯ ಹಜರತ್‌ಅಲಿ ಪನಾರಿ, ವಿಜ್ಞಾನ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸುರೇಶ ಎನ್. ಇತರರಿದ್ದರು.