ಬೆಳಗಾವಿ ಮಹಾನಗರ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಬುಧವಾರ ಬಜೆಟ್ ಪ್ರತಿಯನ್ನು ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ, ಅಧ್ಯಕ್ಷೆ ರೇಖಾ ಹೂಗಾರ, ಆಯುಕ್ತ ಕಾರ್ತಿಕ್ ಎಂ. ಪ್ರದರ್ಶಿಸಿದರು.
ಬೆಳಗಾವಿ : ಇಲ್ಲಿನ ಮಹಾನಗರ ಪಾಲಿಕೆ 2026-27ನೇ ಸಾಲಿನಲ್ಲಿ 92.32. ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದೆ. ಒಟ್ಟು 442.54 ಕೋಟಿ ರೂ. ಆದಾಯ ನಿರೀಕ್ಷಿಸಿದ್ದು, ಅಭಿವೃದ್ಧಿಗಾಗಿ 441.62 ಕೋಟಿ ರೂ. ವೆಚ್ಚವಾಗಲಿದೆ.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಮೇಯರ್ ಮಂಗೇಶ ಪವಾರ್ ನೇತೃತ್ವದ ವಿಶೇಷ ಪರಿಷತ್ ಸಭೆಯಲ್ಲಿ ವಿವಿಧ ತೆರಿಗೆ ಆದಾಯ, 15 ಮತ್ತು 16ನೇ ಹಣಕಾಸು ಆಯೋಗ, ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಯೋಜನೆಯಡಿ ವಿಶೇಷ ಅನುದಾನ ನಿರೀಕ್ಷೆ ಆಧಾರದ ಮೇಲೆ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಹೂಗಾರ ಪ್ರಸಕ್ತ ಸಾಲಿನ ಅಂದಾಜು ಆಯವ್ಯಯ ಮಂಡಿಸಿದರು.
ಕೇಂದ್ರದ ಸಿಟೀಸ್-2 ಯೋಜನೆಗೆ 5 ಕೋಟಿ ರೂ., ಎಸ್‌ಸಿ,ಎಸ್‌ಟಿ, ಮಹಿಳೆಯರು, ಪೌರಕಾರ್ಮಿಕರಿಗೆ, ಪಾಲಿಕೆ ಸಿಬ್ಬಂದಿಗೆ ಆರೋಗ್ಯ ವಿಮೆ, ಉಪಹಾರ ವ್ಯವಸ್ಥೆ, ಸ್ವಚ್ಛ ನಗರ, ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ ಹೀಗೆ ವಿವಿಧ ಯೋಜನೆ ಕುರಿತು ಆಯವ್ಯಯದಲ್ಲಿ ಘೋಷಿಸಿದ್ದಾರೆ. ಸರ್ಕಾರಿ ನಿಯಮಾವಳಿ ಪ್ರಕಾರ ಪರಿಸರಸ್ನೇಹಿ ಕಟ್ಟಡಗಳಿಗೆ, ಆಸ್ತಿ ತೆರಿಗೆಯಲ್ಲಿ ವಿನಾಯಿತಿ ಹಾಗೂ ಸ್ವಾತಂತ್ರ್ಯ ಯೋಧರಿಗೆ ಶೇ.10ರಷ್ಟು ರಿಯಾಯಿತಿ ಮುಂದುವರಿಯಲಿದೆ ಎಂದು ಹೂಗಾರ ಮಾಹಿತಿ ನೀಡಿದರು.
ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ, ಆಯುಕ್ತ ಕಾರ್ತಿಕ್ ಎಂ., ಆಡಳಿತ ಪಕ್ಷದ ನಾಯಕ ಹಣಮಂತ ಕೊಂಗಾಲಿ, ಉಪ ಆಯುಕ್ತರಾದ ಉದಯಕುಮಾರ ತಳವಾರ, ಡಾ.ಸಿದ್ದಪ್ಪ ಹುಲ್ಲೋಳಿ ಇತರರಿದ್ದರು.
ವಾರ್ಡ್ ಪ್ರಗತಿಗೆ 27 ಕೋಟಿ ರೂ. ಖರ್ಚು
ಪಾಲಿಕೆಯ 58 ವಾರ್ಡ್ ವ್ಯಾಪ್ತಿಯಲ್ಲಿ ಸಿ.ಸಿ.ರಸ್ತೆ, ಚರಂಡಿ ನಿರ್ಮಾಣ ಹೀಗೆ ವಿವಿಧ ಮೂಲಭೂತ ಸೌಕರ್ಯಕ್ಕಾಗಿ 27 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಪಾಲಿಕೆ ಆಸ್ತಿ ಮತ್ತು ಖಾಲಿ ಪ್ರದೇಶ ಸಂರಕ್ಷಿಸಲು 2 ಕೋಟಿ ರೂ., ಒಳಚರಂಡಿ ದುರಸ್ತಿ ಮತ್ತು ಹೊಸ ಒಳಚರಂಡಿ ನಿರ್ಮಾಣ ಹಾಗೂ ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕಾಗಿ 2 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.