ಸವದತ್ತಿ ನಗರದ ಗ್ರಾಮದೇವಿ ದೇವಸ್ಥಾನದಲ್ಲಿ ಮೇಟಿ ಮನೆತನದ ಸಂಪ್ರದಾಯದಂತೆ ಮೇಟಿಗೆ ಪೂಜೆ ಸಲ್ಲಿಸಲಾಯಿತು. ಭರಮಪ್ಪ ಅಣ್ಣಿಗೇರಿ, ಸುಭಾಸ ಮೇಟಿ, ಸಂಜೀವ ಮೇಟಿ, ಬಸವರಾಜ ಮೇಟಿ, ಮಂಜುನಾಥ ಮೇಟಿ, ಶಿವಪ್ಪ ಮೇಟಿ ಇತರರಿದ್ದರು. 
ಬೆಳಗಾವಿ

ದೇವಿಯರ ಪ್ರಾಣ ಪ್ರತಿಷ್ಠಾಪನೆ ಅದ್ದೂರಿ

ಚನ್ನಬಸಪ್ಪ ಬಾಳಪ್ಪ ರೊಟ್ಟಿ
ವಿಜಯವಾಣಿ ಸುದ್ದಿಜಾಲ ಸವದತ್ತಿ
ಗ್ರಾಮದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ವೈಶಾಖ ಕೃಷ್ಣ ಏಕಾದಶಿ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ವಿವಿಧ ಧಾರ್ಮಿಕ ಹಾಗೂ ವೈದಿಕ ಪೂಜೆ ಕೈಂಕರ್ಯ ನೆರವೇರಿದವು. ಗ್ರಾಮದೇವಿ ದೇವಸ್ಥಾನ ಹಾಗೂ ಗೋಡಿ ದ್ಯಾಮವ್ವ ದೇವಸ್ಥಾನದಲ್ಲಿ ಜರುಗಿದ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಭಕ್ತರು ಭಕ್ತಿಸೇವೆ ಸಲ್ಲಿಸಿದರು.
ಬೆಳಗಿನ ವೃಷಭ ಲಗ್ನದಲ್ಲಿ ಗ್ರಾಮದೇವಿಯರ ಪ್ರಾಣ ಪ್ರತಿಷ್ಠಾಪನೆ, ನೇತ್ರೋನ್ನೀಲನ, ರಕ್ಷಾ ಬಂಧನ ಹಾಗೂ ಆಜ್ಯಾವಲೋಕನ ಕಾರ್ಯಕ್ರಮ ನೆರವೇರಿಸಲಾಯಿತು. ಗ್ರಾಮದೇವಿ ದೇವಸ್ಥಾನದಲ್ಲಿ ಮಹಾಗಣಪತಿ ಪೂಜೆ, ಸಿದ್ಧಿದಾತ್ರಿ ಹೋಮ, ಚಂಡಿಕಾ ಹೋಮ, ಪ್ರತಿಷ್ಠಾ ಹೋಮ ಹಾಗೂ ಶಾಂತಿ ಹೋಮಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯರ ನೇತೃತ್ವದಲ್ಲಿ ಅಷ್ಟತಂತ್ರ ಕಲಾನ್ಯಾಸ ಕಾರ್ಯಕ್ರಮ ಜರುಗಿತು. ಬಳಿಕ ಭಕ್ತರು ದೇವಿ ದರ್ಶನಾಶೀರ್ವಾದ ಪಡೆದರು.
ಕದಳಿ ವೃಕ್ಷ ಛೇದನ, ಧೇನು ದರ್ಶನ, ಮಹಾಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ಜರುಗಿತು. ಡೊಳ್ಳು, ತಾಶಾ ಹಾಗೂ ವಿವಿಧ ಮಂಗಲ ವಾದ್ಯಗಳು ಆಧ್ಯಾತ್ಮಿಕ ಸಂಭ್ರಮ ಹೆಚ್ಚಿಸಿದವು.
ಸುನೀತಾ ಪಾಟೀಲ, ಭರಮಪ್ಪ ಅಣ್ಣಿಗೇರಿ, ರಾಜೇಂದ್ರ ಬಡಿಗೇರ, ಉಮೇಶ ಬಡಿಗೇರ, ರಮೇಶ ಬಡಿಗೇರ, ಸುಭಾಸ ಮೇಟಿ, ಸಂಜೀವ ಮೇಟಿ, ಬಸವರಾಜ ಮೇಟಿ, ಮಂಜುನಾಥ ಮೇಟಿ, ಶಿವಪ್ಪ ಮೇಟಿ, ಗ್ರಾಮದೇವತಾ ಜಾತ್ರೆ ಋತ್ವಿಜರಾದ ಶೇಷಗಿರಿ ಭಟ್ ಜೋಶಿ, ಭಾಸ್ಕರಭಟ್ಟ ಜೋಶಿ, ಯೋಗೇಶಭಟ್ಟ ಜೋಶಿ, ಅರುಣ ಕುರಡೂರ, ವಿಶ್ವ ಹೊಸಪೇಟೆ, ಕೌಶಿಕ ಶರ್ಮಾ ಇತರರಿದ್ದರು.
ಜೂನ್ 29ರವರೆಗೆ ಶುಭಕಾರ್ಯಗಳಿಗೆ ವಿರಾಮ
ಮೇ 13ರಿಂದ ನಿಜ ಜೇಷ್ಠ ಶುಕ್ಲ ಪೌರ್ಣಿಮೆಯಿಂದ (ನಿಜಕಾರ ಹುಣ್ಣಿಮೆ) ಜೂ.28ರವರೆಗೆ ಯಾವುದೇ ಶುಭಕಾರ್ಯ ನಡೆಸಬಾರದು. ಜೂ.28ರಂದು ಪ್ರತಿಷ್ಠಾಪನೆಯ 48ನೇ ದಿನ ಮಹಾಮಂಡಲೋತ್ಸವ ಜರುಗಲಿದ್ದು, ಜೂ.29ರ ಬಳಿಕ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಶುಭಕಾರ್ಯ ನೆರವೇರಿಸಬಹುದಾಗಿದೆ ಎಂದು ಜಾತ್ರಾ ಸಮಿತಿ ತಿಳಿಸಿದೆ.