ಬೆಳಗಾವಿಯ ಜಿಐಟಿಯಲ್ಲಿ ಶುಕ್ರವಾರ ಜರುಗಿದ ಸಂಸ್ಕೃತ ಕಲಿಕಾ ಕೇಂದ್ರದ ಉದ್ಘಾಟನೆಯಲ್ಲಿ ಡಾ.ರಾಜೇಂದ್ರ ಬೆಳಗಾಂವಕರ, ಸುವರ್ಣ ಭಂಡಾರಿ, ಸಾಯಿ ವಿಜಯ ಆಲೂರು, ಪ್ರೊ.ವಿದ್ಯಾಧೀಶ ಪಾಂಡುರಂಗತಿ, ಡಾ.ಪವನ ಕುಂಚೂರ ಇತರರು ಪಾಲ್ಗೊಂಡಿದ್ದರು. 
ಬೆಳಗಾವಿ

ಜಿಐಟಿಯಲ್ಲಿ ಸಂಸ್ಕೃತ ಕಲಿಕಾ ಕೇಂದ್ರ ಆರಂಭ

ಡಿ.ವಿ. ಕಮ್ಮಾರ

ಬೆಳಗಾವಿ :

ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಲ್ಲಿ ಭಾಷೆಗಳು ಮಹತ್ವ ಪಡೆದುಕೊಂಡಿವೆ. ಈ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ತಾಂತ್ರಿಕ ಆಯಾಮಗಳಲ್ಲಿ ಸಂಸ್ಕೃತ ಭಾಷೆಯ ಸಂಶೋಧನೆ ನಡೆಸಲು ಸಾಧ್ಯತೆಗಳ ಬಗ್ಗೆ ವಿದ್ಯಾರ್ಥಿಗಳು ಗಮನ ಕೊಡಬೇಕು ಎಂದು ಕೆಎಲ್‌ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿಐಟಿ) ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ ಹೇಳಿದರು.

ಕೆಎಲ್‌ಎಸ್ ಜಿಐಟಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಂಸ್ಕೃತ ದಿನಾಚರಣೆ ಸಮಾರಂಭದಲ್ಲಿ ನೂತನ ಸಂಸ್ಕೃತ ಕಲಿಕಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಅಂತರ್‌ಶಿಸ್ತೀಯ ಶೈಕ್ಷಣಿಕ ಉಪಕ್ರಮಗಳಿಗೆ ಕೆಎಲ್‌ಎಸ್ ಆಡಳಿತ ಸಂಪೂರ್ಣ ಬೆಂಬಲ ನೀಡುತ್ತ ಬಂದಿದೆ. ಹೀಗಾಗಿ ಈಗ ಸಂಸ್ಕೃತ ಕಲಿಕಾ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಆನ್‌ಲೈನ್ ಮೂಲಕ ಪ್ರೊ.ಅಂಬಾ ಕುಲಕರ್ಣಿ ಮಾತನಾಡಿ, ಗಣಿತಶಾಸ್ತ್ರ ಮತ್ತು ಆಯುರ್ವೇದಶಾಸ್ತ್ರಗಳ ವೈಜ್ಞಾನಿಕ ಪ್ರಸ್ತುತತೆ, ಸಂಸ್ಕೃತದಲ್ಲೇ ಎಐ ಅನ್ವಯಿಕೆಗಳ ಕುರಿತು ಸಂಶೋಧನೆ ನಡೆಸುವ ಅಗತ್ಯತೆ ಕುರಿತು ವಿವರಿಸಿದರು.
ಸುವರ್ಣ ಭಂಡಾರಿ ಮಾತನಾಡಿ, ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ನಿರಂತರವಾಗಿ ಮುನ್ನಡೆಯುವ ಮನೋಭಾವವೇ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ. ಒಂದು ವರ್ಷದ ಹಿಂದೆ ಬಿತ್ತಿದ ಸಂಸ್ಕೃತದ ಬೀಜವು ಇಂದು ಸಂಸ್ಕೃತ ಕಲಿಕಾ ಕೇಂದ್ರದ ಸ್ಥಾಪನೆಯೊಂದಿಗೆ ಮೊಳಕೆಯೊಡೆದಿದೆ ಎಂದರು.
ಸಂಸ್ಕೃತ ಶಿಕ್ಷಕ ತಿರುಪತಿಯ ಸಾಯಿ ವಿಜಯ ಆಲೂರು, ಆಧುನಿಕ ತಂತ್ರಜ್ಞಾನಗಳಲ್ಲಿ ಸಂಸ್ಕೃತದ ಬಳಕೆ ಹಾಗೂ ಸಂಸ್ಕೃತ ಕಲಿಕೆ ಮತ್ತು ಸಂಶೋಧನೆಯನ್ನು ತಂತ್ರಜ್ಞಾನದ ಮೂಲಕ ವಿಸ್ತರಿಸುವ ಸಾಧ್ಯತೆಗಳ ಕುರಿತು ಮಾಹಿತಿ ನೀಡಿದರು.
ಅಂತಾರಾಷ್ಟ್ರೀಯ ಸಂಸ್ಕೃತ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ಆನ್‌ಲೈನ್ ಸಂಸ್ಕೃತ ಟ್ರೆಷರ್ ಹಂಟ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಸ್ಕೃತ ಕಲಿಕಾ ಕೇಂದ್ರದ ಸಂಚಾಲಕ ಪ್ರೊ.ವಿದ್ಯಾಧೀಶ ಪಾಂಡುರಂಗಿ ಸ್ವಾಗತಿಸಿದರು. ಡಾ. ಪವನ ಕುಂಚೂರ ವಂದಿಸಿದರು.