ಐನಾಪುರ ಪಟ್ಟಣದ ಬನ್ನಿ ಮಂಟಪದ ಆವರಣದಲ್ಲಿ ೫೧ಸತ್ಯ ಸಿದ್ಧರ ಭೇಟಿ ನಡೆಯಿತು. 
ಬೆಳಗಾವಿ

ಭಕ್ತಸಂಕುಲಕ್ಕೆ ಒಳಿತು ಬಯಸುವ ಸಂತರು

ವಿದ್ಯಾ ಶೆಟ್ಟನಗೌಡ್ರ

ಪ್ರಮುಖ ಮುಖ್ಯಾಂಶಗಳು

  • ಅಮರೇಶ್ವರ ಮಹಾರಾಜರ ಆಶೀರ್ವಚನ
  • ಕೆರಿಸಿದ್ಧೇಶ್ವರ ದೇವರ ಪೌಳಿ ವಾಸ್ತುಶಾಂತಿ
ಐನಾಪುರ: ಭಾರತದ ಸಂತಶ್ರೇಷ್ಠರು ಸನಾತನ ಹಿಂದು ಧರ್ಮ ಉಳಿಸಿಕೊಂಡು ಸಕಲ ಭಕ್ತಸಂಕುಲಕ್ಕೆ ಒಳಿತು ಮಾಡುತ್ತ ಬಂದಿದ್ದಾರೆ ಎಂದು ಕೌಲಗುಡ್ಡ ಸಿರಿ ಸಿದ್ಧಾಶ್ರಮದ ಅಮರೇಶ್ವರ ಮಹಾರಾಜರು ಹೇಳಿದರು.
ಇಲ್ಲಿನ ಕೆರಿಸಿದ್ದೇಶ್ವರ ದೇವರ ಪೌಳಿ ವಾಸ್ತುಶಾಂತಿ ಹಾಗೂ ಲಕ್ಷದೀಪೋತ್ಸವ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ವಿದೇಶಿಗರೂ ಸನಾತನ ಧರ್ಮಕ್ಕೆ ಮಾರುಹೋಗುತಿದ್ದು, ಇಲ್ಲಿನ ಹೋಮ-ಹವನಕ್ಕೆ ವಿಶೇಷ ಸ್ಥಾನವಿದೆ. ದೇವಕಾರ್ಯವು ಭೇದಭಾವವಿಲ್ಲದೆ ಅರ್ಥಪೂರ್ಣವಾಗಿ ನಡೆಯುತ್ತಿದೆ. ಅಸಂಖ್ಯಾತ ಭಕ್ತರು ಕೆರಿಸಿದ್ದೇಶ್ವರನ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸುವುದು ಸಂತಸ ತಂದಿದೆ ಎಂದರು.
ಬೆಳಗ್ಗೆ ಮಖಣಾಪುರದ ಸೋಮಲಿಂಗೇಶ್ವರ ಶ್ರೀಗಳ ನೇತೃತ್ವದಲ್ಲಿ ವಿವಿಧ ಹೋಮಕಾರ್ಯ ನೆರವೇರಿಸಲಾಯಿತು. ಕೆರಿಸಿದ್ದೇಶ್ವರರಿಗೆ ಮಹಾಪೂಜೆ ನೆರವೇರಿತು. ೧೦೦೮ ಅಂಬಲಿ ಕೊಡ ಹಾಗೂ ಆರತಿಯನ್ನು ಸುಮಂಗಲೆಯರು ಕೆಆರ್‌ಇ ಶಿಕ್ಷಣ ಸಂಸ್ಥೆಯಿಂದ ಪಟ್ಟಣ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನದವರೆಗೆ ತಲುಪಿದರು.
೫೧ ಸತ್ಯ ಸಿದ್ಧರ ಭೇಟಿ: ಪಟ್ಟಣದ  ಕವಲಿಮಡ್ಡಿಯ ಬನ್ನಿ ಮಂಟಪ ಮೈದಾನದಲ್ಲಿ ಭಾನುವಾರ ೫೧ ಸತ್ಯ ಸಿದ್ಧರ ಭೇಟಿ ನಡೆಯಿತು.   ಲಕ್ಷಾಂತರ ಭಕ್ತರು ಭಂಡಾರದಲ್ಲಿ ಮಿಂದೆದ್ದು ದೇವರ ದರ್ಶನ ಪಡೆದರು. ಪಲ್ಲಕ್ಕಿಗಳ ಸಮಾಗಮ ನೋಡುಗರ ಕಣ್ಮನ ಸೆಳೆಯಿತು. ಸುಮಾರು ಐದು ಟನ್ ಭಂಡಾರ ಬಳಸಲಾಯಿತು. ನಾಟಕ, ಡೊಳ್ಳಿನ ಹಾಡು ಇತರ ಮನರಂಜನೆ ಕಾರ್ಯಕ್ರಮಗಳು ನಡೆದವು.
ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಐನಾಪುರ ಕೇರಿ ಸಿದ್ಧೇಶ್ವರ, ಮೋಳೆ ಓಘಸಿದ್ಧ, ಬೇವರಗಿ ಬಿಳ್ಯಾನ ಸಿದ್ಧ, ಗುರು ಸೋಮಲಿಂಗ, ಇಂದಾಪುರ ಬಳೋಘಸಿದ್ಧ ಭೇಟಿಯನ್ನು ಜನರು ಕಣ್ತುಂಬಿಕೊಂಡರು.  
ಹತ್ತೂರಿನ ಬನಸಿದ್ದ ಶ್ರೀಗಳು, ರಾಜುಗೌಡ ಪಾಟೀಲ, ಸುಭಾಷ ಪಾಟೀಲ, ಹರ್ಷವರ್ಧನ ಪಾಟೀಲ, ಅರುಣ ಗಾಣಿಗೇರ, ದಾದಾ ಜಂತೆನ್ನವರ, ಸುಂಜು ಕುಚನೂರೆ, ಸಂತೋಷ ಪಾಟೀಲ, ಜಿಪಂ ಮಾಜಿ ಸದಸ್ಯೆ ಪ್ರೇಮಲತಾ ರಡ್ಡಿ, ಶಾಂತಿನಾಥ ಸವದತ್ತಿ, ಸೋಮಲಿಂಗ ಒಡೆಯರ, ಅಮಸಿದ್ದ ಒಡೆಯರ, ಮಲಕಾರಿ ಒಡೆಯರ ಇತರರಿದ್ದರು.