ಅಥಣಿಯ ಸಾಯಿಮಂದಿರದಲ್ಲಿ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವದಲ್ಲಿ ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ, ಶಾಂತವೀರಯ್ಯ ಹಿರೇಮಠ ಇತರರಿದ್ದರು.
ಅಥಣಿ: ಸಾಯಿಬಾಬಾರ ಆಧ್ಯಾತ್ಮಿಕ ಪವಾಡ ನಮಗೆಲ್ಲ ಆದರ್ಶವಾಗಿದೆ. ಸಮಾಜ ನಿರ್ಮಾಣಕ್ಕೆ ಅವರ ಭಕ್ತಿಯ ಮಾರ್ಗ, ದಾನದ ಗುಣ, ಪರೋಪಕಾರ ಸಮುದಾಯಕ್ಕೆ ಮಾದರಿಯಾಗಿದೆ ಎಂದು ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಪಟ್ಟಣದ ಸತ್ತಿ ರಸ್ತೆಯಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಯುವಕರು ಆಧ್ಯಾತ್ಮಿಕ, ಧಾರ್ಮಿಕ ಕಾರ್ಯ ಮಾಡುವುದರಿಂದ ಇತರರಿಗೆ ಮಾದರಿಯಾಗಿದ್ದಾರೆ. ಒಳ್ಳೆಯ ಕಾರ್ಯ ಮಾಡಲು ಪ್ರೇರಕ ಶಕ್ತಿ ಸಾಯಿಬಾಬಾ ಆಗಿದ್ದಾರೆ. ಆತ್ಮವಿಶ್ವಾಸ, ನಂಬಿಕೆ ಬಹಳ ಮುಖ್ಯವಾಗಿದೆ. ಹಸಿದವರಿಗೆ, ನೊಂದವರಿಗೆ ಆಶ್ರಯವಾಗುವ ಕಾರ್ಯವಾಗಿದೆ. ಇಂತಹ ಗುಣ ಬೆಳೆಸಿಕೊಂಡು ಸಮಾಜಮುಖಿ ಸೇವೆಯಲ್ಲಿ ತೊಡಗಬೇಕು. ಆಗ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಶಾಸಕ ಲಕ್ಷ್ಮಣ ಸವದಿ ಮತ್ತು ಯುವ ಮುಖಂಡ ಚಿದಾನಂದ ಸವದಿ ದೇವಸ್ಥಾನಕ್ಕೆ ಭೇಟಿ ನೀಡಿ ಸಾಯಿಬಾಬಾ ದರ್ಶನ ಪಡೆದು ಮಾತನಾಡಿ, ಯುವಕರು ಧಾರ್ಮಿಕವಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ಲಭಿಸುತ್ತದೆ ಎಂದರು.
ಅರ್ಚಕ ಶಾಂತವಿರಯ್ಯ ಹಿರೇಮಠ ಶಾಸಿ ಇವರಿಂದ ಗಂಗಾ ಪೂಜೆ, ಗಣಪತಿ ಪೂಜೆ, ಪಂಚಾಮೃತ ಅಭಿಷೇಕ, ಕುಂಭಾಭಿಷೇಕ, ಪೂರ್ಣಾಹುತಿ, ಅಷ್ಟೋತ್ತರ ನಾಮಾವಳಿ ಪೂಜೆ, ಮಹಾ ಮಂಗಳಾರತಿ ನಡೆಯಿತು.
ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಮಹೇಶ ಹಿರೇಮಠ, ಶೇಖರ ಕೋಲಾರ, ಸೋಮು ವಾಂಗಿ, ಸಂಜು ರಾಯಮಾನೆ, ರಮೇಶ ಬುಲಬುಲೆ, ಸಿದ್ದು ಮೊಟಗಿ, ಮಲಾರಾಮ ಪರಮಾರ, ಚಿದಾನಂದ ನರಗಟ್ಟಿ ಇತರರಿದ್ದರು.