ಬೆಳಗಾವಿ ನಗರದ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಸಭೆಯಲ್ಲಿ ರಾಹುಲ ಶಿಂಧೆ ಮಾತನಾಡಿದರು. ಎಚ್.ಡಿ.ಕೋಳೆಕರ, ರವಿ ಬಂಗಾರೆಪ್ಪ ಇತರರಿದ್ದರು. 
ಬೆಳಗಾವಿ

ಕೃಷಿ ಹೊಂಡಗಳಿಗೆ ಸುರಕ್ಷತಾ ಕ್ರಮ ಕಡ್ಡಾಯ

ಬೆಳಗಾವಿ :

ಜಿಲ್ಲೆಯ ವಿವಿಧ ಯೋಜನೆಗಳಡಿ ನಿರ್ಮಿಸಲಾಗಿರುವ ಎಲ್ಲಾ ಕೃಷಿ ಹೊಂಡಗಳಿಗೆ ಕಡ್ಡಾಯವಾಗಿ ತಂತಿ ಬೇಲಿ ಅಳವಡಿಸಿ, ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ನಿರ್ಲಕ್ಷೃ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ರಾಹುಲ ಶಿಂಧೆ ಎಚ್ಚರಿದರು.
ನಗರದ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಹಾಗೂ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿ, ಕೃಷಿ ಹೊಂಡಗಳಿಂದ ಸಂಭವಿಸಬಹುದಾದ ಅವಘಡಗಳನ್ನು ತಡೆಯಲು ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ತಂತಿ ಬೇಲಿ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳ ಕುರಿತು ವಿವಿಧ ಮಾಧ್ಯಮಗಳ ಮೂಲಕ ರೈತರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದರು.
ಆತ್ಮಾ, ಕೃಷಿ ಭಾಗ್ಯ, ಹೈಟೆಕ್ ಹಾರ್ವೆಸ್ಟರ್ ಹಬ್, ಕೃಷಿ ಯಾಂತ್ರೀಕರಣ, ರಾಷ್ಟ್ರೀಯ ನೈಸರ್ಗಿಕ ಅಭಿಯಾನ, ಕರ್ನಾಟಕ ರೈತ ಸಮೃದ್ದಿ ಯೋಜನೆ, ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಪೌಷ್ಟಿಕ ಅಭಿಯಾನ, ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ- ಎಣ್ಣೆ ಕಾಳು, ಬೆಳೆ ವೈವಿದ್ಯತೆ, ದ್ವಿದಳ ಧಾನ್ಯಗಳಲ್ಲಿ ಆತ್ಮ ನಿರ್ಭರತೆ, ವಿಬಿ-ಜಿ ರಾಮ ಜಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ ವಹಿಸಬೇಕು ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್.ಡಿ. ಕೋಳೆಕರ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಈವರೆಗೆ 354 ಮಿ.ಮೀ. ವಾಡಿಕೆ ಮಳೆಗೆ 341 ಮಿ.ಮೀ. ಮಳೆ ಆಗಿದ್ದು, ಶೇ. 4 ರಷ್ಟು ಮಳೆ ಕೊರತೆಯಾಗಿದೆ. ಮುಂಗಾರು ಹಂಗಾಮಿಗೆ 250736 ಮೆ.ಟನ್ ರಸಗೊಬ್ಬರದ ಅವಶ್ಯಕತೆ ಇದ್ದು ಈವರೆಗೆ ಜಿಲ್ಲೆಯ 287370 ಮೆ.ಟನ್ ರಸಗೊಬ್ಬರ ಪೂರೈಕೆಯಾಗಿದೆ. 152776 ಮೆ.ಟನ್ ವಿವಿಧ ರಸಗೊಬ್ಬರ ವಿರತಣೆಯಾಗಿದ್ದು 134594 ಮೆ.ಟನ್ ರಸಗೊಬ್ಬರ ಲಭ್ಯವಿದೆ. ಕಾಪು ದಾಸ್ತಾನು ಯೋಜನೆಯಡಿ 8408 ಮೆ.ಟನ್ ಯೂರಿಯಾ ಹಾಗೂ 1265 ಮೆ.ಟನ್ ಡಿ.ಎ.ಪಿ. ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ ಎಂದರು.
ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪ, ಉಪನಿರ್ದೇಶಕ ಸಲೀಂ ಸಂತಗ್ರಾಸ್, ಸಹಾಯಕ ಕೃಷಿ ನಿರ್ದೇಶಕ ಸಿ.ಐ.ಹೂಗಾರ, ಕೆವಿಕೆ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಇತರರಿದ್ದರು.
...........
ಬಾಕ್ಸ್
ಸಭೆಯಲ್ಲಿ ಚರ್ಚಿಸಿದ ಪ್ರಮುಖ ವಿಷಯ
*ಜಾಗೃತಿ ಅಭಿಯಾನ ಮುಂತಾದ ಕಾರ್ಯಕ್ರಮಗಳ ಮೂಲಕ 560403 ರೈತರಿಗೆ ಕೃಷಿ ತಾಂತ್ರಿಕತೆ ಮಾಹಿತಿ.
* ಜಿಲ್ಲೆಯ 7048 ರೈತರಿಗೆ ಮಾಹಿತಿ ಹಾಗೂ ತರಬೇತಿ ನೀಡಲಾಗಿದೆ.
*ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ 12 ಕ್ಲಸ್ಟರ ಗಳಲ್ಲಿ ಆಸಕ್ತ ರೈತರನ್ನು ಆಯ್ಕೆ ಮಾಡಲಾಗಿದೆ.
*ರಾಷ್ಟ್ರೀಯ ತೋಟಗಾರಿಕೆ ಮಿಷನ, ವಿಬಿ-ಜಿ ರಾಮ್-ಜಿ ಯೋಜನೆಗಳಡಿ ಹೆಚ್ಚಿನ ಸಹಾಯಧನ ಸೌಲಭ್ಯ ಕಲ್ಪಿಸಿ.
*ರೈತರಿಗೆ ಯಾವುದೇ ಅಡೆತಡೆಯಿಲ್ಲದೇ ತೋಟಗಾರಿಕೆ ಚಟುವಟಿಕೆ ಕೈಗೊಳ್ಳಲು ಬ್ಯಾಂಕುಗಳಿಂದ ಸಾಲಸೌಲಭ್ಯ ಕಲ್ಪಿಸಿ.
*ರೇಷ್ಮೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಅರಣ್ಯ ಇಲಾಖೆ ಕಾರ್ಯಕ್ರಮ ಅನುಷ್ಠಾನಗೊಳಿಸಿ
......