ಬೈಲಹೊಂಗಲ ತಾಲೂಕಿನ ತೆನಿಕೊಳ್ಳದ ಕೆಎಲ್‌ಇ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹೊಂಬೆಳಕು-26 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜಯಾನಂದ ಸರಸ್ವತಿ ಸ್ವಾಮೀಜಿ ಗೌರವಿಸಿದರು. ಡಾ. ಬಿ. ಡಿ. ಬಿರಾದಾರ, ಡಾ.ಮಂಜುನಾಥ ಚೌರಡ್ಡಿ, ಶಂಕರಗೌಡ ಪಾಟೀಲ ಇತರರಿದ್ದರು. 
ಬೆಳಗಾವಿ

ತ್ಯಾಗ,ಸೇವೆ ಭಾರತೀಯ ಸಂಸ್ಕೃತಿಯ ಸ್ತಂಭ

ಬೆಳಗಾವಿ: ತ್ಯಾಗ ಮತ್ತು ಸೇವೆ ಭಾರತೀಯ ಸಂಸ್ಕೃತಿಯ ಎರಡು ಬಲವಾದ ಸ್ತಂಭಗಳಾಗಿದ್ದು, ಯುವಜನತೆ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಧಾರವಾಡದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಬೈಲಹೊಂಗಲ ತಾಲೂಕಿನ ತೆನಿಕೊಳ್ಳದ ಕೆಎಲ್‌ಇ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹೊಂಬೆಳಕು-26 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣವನ್ನು ಕೇವಲ ಪ್ರಮಾಣಪತ್ರ ಪಡೆಯುವ ಉದ್ದೇಶಕ್ಕೆ ಸೀಮಿತಗೊಳಿಸದೆ, ಜ್ಞಾನ ಸಂಪಾದನೆ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಬಳಸಿಕೊಳ್ಳಬೇಕು.
ಕೃಷಿ ಪದವೀಧರರು ರೈತರ ಶ್ರಮ, ಸಂಕಷ್ಟ ಹಾಗೂ ಗ್ರಾಮೀಣ ಬದುಕಿನ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳಬೇಕು. ಆಧುನಿಕ ಕೃಷಿ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಬೇಕು.ಸ್ವಾಮಿ ವಿವೇಕಾನಂದರ ಆದರ್ಶಗಳು ಯುವಜನತೆಗೆ ಸ್ಫೂರ್ತಿಯ ಮೂಲವಾಗಿವೆ. ಅವರ ಚಿಂತನೆಗಳನ್ನು ಅಧ್ಯಯನ ಮಾಡಿ, ಆತ್ಮವಿಶ್ವಾಸ, ಧೈರ್ಯ, ಶಿಸ್ತು ಹಾಗೂ ಸೇವಾ ಮನೋಭಾವದಿಂದ ಕೂಡಿದ ಸಿಂಹದಂತಹ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ. ಬಿ. ಡಿ. ಬಿರಾದಾರ ಮಾತನಾಡಿ, ವಿದ್ಯಾರ್ಥಿ ಜೀವನವು ವ್ಯಕ್ತಿತ್ವ ನಿರ್ಮಾಣದ ಅತ್ಯಂತ ಮಹತ್ವದ ಹಂತವಾಗಿದೆ. ಸತ್ಯ, ಜ್ಞಾನ ಮತ್ತು ಆನಂದಗಳು ಜೀವನದ ಸಾತ್ವಿಕ ಮೌಲ್ಯಗಳಾಗಿದ್ದು, ವಿದ್ಯಾರ್ಥಿಗಳು ಇವುಗಳನ್ನು ತಮ್ಮ ಬದುಕಿನ ಭಾಗವಾಗಿಸಿಕೊಳ್ಳಬೇಕು.ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ, ಕಲಾ ಪ್ರತಿಭೆ, ಪ್ರತಿಭಾ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ಹೊರಹಾಕಲು ಹೊಂಬೆಳಕು ಉತ್ತಮ ವೇದಿಕೆಯಾಗಿದೆ. ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ನೃತ್ಯ, ಸಂಗೀತ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆದವು. ಕಲಾ ಪ್ರತಿಭೆಯೊಂದಿಗೆ ಭಾರತೀಯ ಸಂಸ್ಕೃತಿಯ ವೈಭವವನ್ನು ಅನಾವರಣಗೊಳಿಸಿದ ವಿದ್ಯಾರ್ಥಿಗಳ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ, ಶಂಕರಗೌಡ ಪಾಟೀಲ ಇತರರಿದ್ದರು.