ಬೆಳಗಾವಿ ಶ್ರೀನಗರದಲ್ಲಿ ಶುಕ್ರವಾರ ಬಾಲಭವನದಲ್ಲಿ ಬಾಕ್ಸ್ ಕ್ರಿಕೆಟ್ ಮೈದಾನವನ್ನು ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಪ್ರಸ್ತುತ ದಿನಗಳಲ್ಲಿ ಕ್ರಿಕೆಟ್‌ನಲ್ಲಿ ಸಾಕಷ್ಟು ಅವಕಾಶಗಳು ಸೃಷ್ಟಿಯಾಗುತ್ತಿದ್ದು,ಅದಕ್ಕೆ ತಕ್ಕಂತೆ ಮಕ್ಕಳಿಗೆ ಸೂಕ್ತ ತರಬೇತಿ ಕೊಡಿಸುವುದು ಅವಶ್ಯಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಜಿಲ್ಲಾಡಳಿತ,ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜವಾಹರ ಬಾಲಭವನ ಸೊಸೈಟಿ, ಜಿಲ್ಲಾ ಬಾಲ ಭವನ ಸಮಿತಿ ಆಶ್ರಯದಲ್ಲಿ ಶುಕ್ರವಾರ ಬಾಕ್ಸ್ ಕ್ರಿಕೆಟ್ ಮೈದಾನ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿರುವ ಕ್ರೀಡಾ ಪಟುಗಳಿಗೆ ಸೂಕ್ತ ವೇದಿಕೆ ಸಿಗದಿರುವ ಹಿನ್ನೆಲೆ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಕ್ರಿಡೆಗೆ ತಕ್ಕಂತೆ ಮಕ್ಕಳಿಗೆ ತರಬೇತಿ ಕೊಡಿಸಿದರೆ ಗ್ರಾಮೀಣ ಮಕ್ಕಳೂ ರಾಷ್ಟ್ರಮಟ್ಟದಲ್ಲಿ ಮಿಂಚಬಲ್ಲರು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಬಾಲ ಭವನದಿಂದ ಬೆಳಗಾವಿಯಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಕ್ರಿಕೆಟ ಪ್ರೇಮಿಗಳಿಗೆ ಅನುಕೂಲವಾಗುವಂತೆ ಬಾಕ್ಸ್ ಕ್ರಿಕೆಟ ಮೈದಾನ ನಿರ್ಮಾಣ ಮಾಡಲಾಗಿದೆ. ಜಿಪಂ ಸಿಇಒ ರಾಹುಲ್ ಶಿಂಧೆ ಆಸಕ್ತಿ ವಹಿಸಿ ಈ ಯೋಜನೆ ರೂಪಿಸಿದ್ದಾರೆ. ಬಾಲಭವನದಿಂದ, ಜಿಪಂ ಹಾಗೂ ಶಾಸಕ ಆಸೀಫ್ ಸೇಠ ಅವರ ಶಾಸಕರ ಅನುದಾನದಿಂದ ಹಣ ಭರಿಸಲಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ಬಾಕ್ಸ್ ಕ್ರಿಕೆಟ್ ಮೈದಾನ ತರಬೇತಿ ಪಡೆಯಲು ಬಡ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದು. ಬೇಸಿಗೆ ರಜೆಯಲ್ಲಿ ಗ್ರಾಮೀಣ ಭಾಗದಿಂದ ಬರುವ ಮಕ್ಕಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಅಲ್ಲದೆ, ಇಲ್ಲಿ ತರಬೇತಿ ಪಡೆದ ಮಕ್ಕಳಿಗೆ ರಣಜಿ ಸೇರಿ ವಿವಿಧ ಕ್ರೀಕೆಟ್ ಅಡಾಮಿಗಳಲ್ಲಿ ಆಡಲು ಸರ್ಕಾರದಿಂದಲೇ ಅವಕಾಶ ಕಲ್ಪಿಸಲಾಗುವುದು. ಪ್ರತಿಭಾವಂತ ಕ್ರೀಡಾಪಟುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಭರವಸೆ ನೀಡಿದರು.
ಶಾಸಕ ಆಸೀಫ ಸೇಠ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಚೇತನಕುಮಾರ, ಮಹಿಳಾ ಅಭಿವೃದ್ಧಿ ಅಧಿಕಾರಿ ಕಾಂಚನ ಅಮಟೆ, ಸಿಡಿಪಿಒಗಳಾದ ರಾಮಮೂರ್ತಿ ಕೆ.ವಿ, ಸುಮಿತ್ರಾ, ಆನಂದ ಅಕಾಡೆಮಿಯ ಆನಂದ ಕರಡಿ ಇತರರಿದ್ದರು.
.........................
ಹೆಬ್ಬಾಳ್ಕರ್ ಬೌಲಿಗೆ ಜಾರಕಿಹೊಳಿ ಬೋಲ್ಡ್!
ಶ್ರೀನಗರದಲ್ಲಿ ನಿರ್ಮಿಸಿದ ಬಾಲಭವನದಲ್ಲಿ ಬಾಕ್ಸ್ ಕ್ರಿಕೆಟ್ ಮೈದಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್ ಮಾಡಿದರು. ನಾಲ್ಕು ಬೌಲ್‌ಗಳನ್ನು ಟಚ ಮಾಡಿದ ಸಚಿವ ಸತೀಶ ಐದನೇ ಬೌಲಿಗೆ ಬೋಲ್ಡ್ ಆದರು.