ಬೆಳಗಾವಿ ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ರಮೇಶ ಕುಡಚಿ ಮಾತನಾಡಿದರು. ಶಿವನಗೌಡ ಪಾಟೀಲ, ನೇತಾಜಿ ಜಾಧವ, ಸರಿತಾ ಪಾಟೀಲ, ನಾಗೇಶ ಸಾತೇರಿ ಇತರರಿದ್ದರು.
ಇಲ್ಲಿನ ಮಹಾನಗರ ಪಾಲಿಕೆಯ ಆಡಳಿತ ಮಂಡಳಿಯ ವೈಫಲ್ಯ, ಅಧಿಕಾರಿಗಳ ದಿವ್ಯ ನಿರ್ಲಕ್ಷೃದಿಂದಾಗಿ ಪಾಲಿಕೆಗೆ ಬರಬೇಕಾಗಿದ್ದ 300 ಕೋಟಿ ರೂ. ಅಧಿಕ ತೆರಿಗೆ ಬಾಕಿ ಉಳಿದುಕೊಂಡಿದೆ. ಸರ್ಕಾರಿ ಆಸ್ಪತ್ರೆ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಆಗುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಜಿ ಮೇಯರ್ ರಮೇಶ ಕುಡಚಿ ದೂರಿದರು.
ನಗರದಲ್ಲಿ ಮಂಗಳವಾರ ಮಾಜಿ ಮೇಯರ್, ಉಪಮೇಯರ್ ಸದಸ್ಯರ ಸಂಘ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಗಾರಿಕೆ, ಹೆಸ್ಕಾಂ, ಭೂಗತ ಕೇಬಲ್, ಸ್ಮಾರ್ಟ್ ಸಿಟಿ, ಎಲ್ ಆ್ಯಂಡ್ ಟೀ ಸೇರಿ ವಿವಿಧ ಏಜೆನ್ಸಿಗಳು ದಶಕಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿವೆ. ಬಾಕಿ ಉಳಿಸಿಕೊಂಡಿರುವ ತೆರಿಗೆಗೆ ಬಡ್ಡಿ ಸಮೇತ ವಸೂಲಿ ಮಾಡಿದರೆ ಪಾಲಿಕೆ ಬರೋಬ್ಬರಿ 300 ಕೋಟಿ ರೂ. ಆದಾಯ ಬರುತ್ತದೆ. ಆದರೆ, ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಪಾಲಿಕೆಗೆ ನಷ್ಟವಾಗುತ್ತಿದೆ. ಆಡಳಿತರೂಢ, ವಿರೋಧ ಪಕ್ಷದ ಸದಸ್ಯರು ಕೂಡ ಈ ವಿಷಯ ಚರ್ಚೆ ಮಾಡದಿರುವುದು ವಿಪರ್ಯಾಸದ ಸಂಗತಿ ಎಂದು ಟೀಕಿಸಿದರು.
ಬೆಳಗಾವಿ ನಗರದಲ್ಲಿ ಮುಜಾವರ್ ಒಡೆತನಕ್ಕೆ ಸೇರಿದ 1100 ಎಕರೆ ಭೂಮಿಯನ್ನು 1965ರಲ್ಲಿಯೇ ಸರ್ಕಾರವು ಪಾಲಿಕೆ ಒಡೆತನಕ್ಕೆ ನೀಡಿತ್ತು. ಆದರೆ, ಪಾಲಿಕೆ ವೈಫಲ್ಯದಿಂದಾಗಿ ಆಸ್ತಿ ಖಾಸಗಿ ವ್ಯಕ್ತಿಗಳ ಪರಭಾರೆ ಆಗುತ್ತಿವೆ. ಅಂದಾಜು 5 ಎಕರೆ ಜಮೀನು ಉದ್ಯಮಿ ಜಯಶೀಲ ಶೆಟ್ಟಿ ಎಂಬುವವರಿಗೆ ಹೆಸರಿಗೆ ಪಾಲಿಕೆ ಹೆಸರಿನಲ್ಲಿರುವ ಆಸ್ತಿ ಖರೀದಿ ಮಾಡಿದಲ್ಲದೆ ಸಿಟಿ ಸರ್ವೆ, ಆಸ್ತಿ ಸಂಖ್ಯೆ ನೀಡುವಲ್ಲಿ ಪಾಲಿಕೆ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದಾರೆ. ಹನುಮಾನ ನಗರದಲ್ಲಿ ಮಾಜಿ ಶಾಸಕ ಮನೆಯ ಹಿಂಭಾಗದಲ್ಲಿರುವ 2 ಎಕರೆ ಪಾಲಿಕೆ ಆಸ್ತಿಗೆ ಖಾಸಗಿ ವ್ಯಕ್ತಿಯೊಬ್ಬರು ನಾಮಫಲಕ ಹಾಕಿಕೊಂಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರಿಗೆ ದೂರು ಕೊಟ್ಟರು ಪ್ರಯೋಜನವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮೇಯರ್, ಉಪಮೇಯರ್ ಸದಸ್ಯರ ಸಂಘದ ಅಧ್ಯಕ್ಷ ಶಿವಾಜಿ ಸುಂಟಕರ ಮಾತನಾಡಿ, ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆ ಸಂಪೂರ್ಣ ದಾರಿ ತಪ್ಪಿದ್ದು, ಜನಸಾಮಾನ್ಯರು ಕೆಲಸಗಳು ಆಗುತ್ತಿಲ್ಲ. ಪಾಲಿಕೆಗೆ ಕೋಟ್ಯಂತರ ರೂ. ತೆರಿಗೆ ಸೂರಿಕೆಯಾಗುತ್ತಿದೆ. ಶ್ರೀಮಂತ ಮಹಾನಗರ ಪಾಲಿಕೆ ಎಂಬ ಖ್ಯಾತಿ ಪಡೆದಿದ್ದ ಬೆಳಗಾವಿ ಪಾಲಿಕೆ ಇದೀಗ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದೆ ಎಂದು ದೂರಿದರು.
ಶಿವನಗೌಡ ಪಾಟೀಲ, ನೇತಾಜಿ ಜಾಧವ, ಸರಿತಾ ಪಾಟೀಲ, ನಾಗೇಶ ಸಾತೇರಿ ಇತರರಿದ್ದರು.