ಕರ್ನಾಟಕ ಲೋಕಾಯುಕ್ತ 
ಬೆಳಗಾವಿ

ಆವಾಸ್ ಯೋಜನೆಯಲ್ಲಿ 29.24 ಕೋಟಿ ರೂ.ಅವ್ಯವಹಾರ

ಬೆಳಗಾವಿ: ರಾಮದುರ್ಗ ತಾಲೂಕಿನ ಕೊಳಗೇರಿ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಸರ್ವರಿಗೂ ಸೂರು (ನಗರ)-2022 ಯೋಜನೆಯಡಿ ಅಂದಾಜು 29.24 ಕೋಟಿ ರೂ.ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಬೆಳಗಾವಿ ಉಪವಿಭಾಗ ಕಚೇರಿಯ ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರ ಶಂಭುಲಿಂಗಪ್ಪ ಬಿ.ಎಸ್., ಬೆಂಗಳೂರು ಮೂಲದ ಖಾಸಗಿ ಗುತ್ತಿಗೆದಾರ ಪ್ರಸಾದ ಎನ್.ಪಿ ಹಾಗೂ ಇತರರ ವಿರುದ್ಧ ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ಸರ್ಕಾರದ ಕೋಟ್ಯಂತರ ರೂ. ದುರುಪಯೋಗ ಪಡಿಸಿಕೊಂಡಿರುವ ಕುರಿತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಯೋಜನೆಯ ಫಲಾನುಭವಿಗಳಿಗೆ ನಿಯಮಾನುಸಾರ ಮನೆಗಳನ್ನು ನಿರ್ಮಿಸಿಕೊಡದೇ ಇದ್ದರೂ ಸಹ, ಕಾಮಗಾರಿ ಪೂರ್ಣಗೊಂಡಂತೆ ನಕಲಿ ದಾಖಲೆಗಳು ಹಾಗೂ ಬಿಲ್ಲುಗಳನ್ನು ಸೃಷ್ಟಿಸಿ ಮಂಡಳಿಯ ವಿವಿಧ ಹಂತದ ಅಧಿಕಾರಿಗಳ ಮೂಲಕ ಅನುಮೋದನೆ ಪಡೆಯಲಾಗಿದೆ. ಉಪವಿಭಾಗ ಹಾಗೂ ವಿಭಾಗ ಮಟ್ಟದ ಅಧಿಕಾರಿಗಳು ಕಾಮಗಾರಿ ಸ್ಥಳ ಪರಿಶೀಲನೆ ನಡೆಸದೇ, ಜಿಪಿಎಸ್ ಆಧಾರಿತ ಛಾಯಾಚಿತ್ರಗಳನ್ನು ಪಡೆಯದೇ, ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಂತೆ ಸುಳ್ಳು ವರದಿ ಸಿದ್ದಪಡಿಸಿದ್ದಾರೆ. 2019 ರಿಂದ 2024ರವರೆಗೆ ವಿವಿಧ ಹಂತಗಳಲ್ಲಿ 29,45,42,035 ರೂ. ಮೊತ್ತವನ್ನು ಗುತ್ತಿಗೆದಾರನಿಗೆ ಪಾವತಿಸಿರುವ ಕುರಿತು ಲೋಕಾಯುಕ್ತ ಬೆಳಗಾವಿ ವಿಭಾಗದ ಆರಕ್ಷಕ ನಿರೀಕ್ಷಕ ಎಸ್.ಎಚ್. ಹೊಸಮನಿ ಪೂರ್ವಭಾವಿ ವಿಚಾರಣೆ ನಡೆಸಿ ಪ್ರಾಥಮಿಕ ವರದಿ ಸಲ್ಲಿಸಿದ್ದರು.
ಗುತ್ತಿಗೆದಾರರು ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಿಸಿಕೊಡುವ ಬದಲು ಮರಳು, ಕಬ್ಬಿಣ, ಸಿಮೆಂಟ ಸೇರಿದಂತೆ ಕಟ್ಟಡ ಸಾಮಗ್ರಿಗಳನ್ನು ಮಾತ್ರ ಪೂರೈಸಿದ್ದಾರೆ. ಪ್ರತಿ ಫಲಾನುಭವಿಗೆ 1.10 ಲಕ್ಷ ರೂ.ರಂತೆ 600 ಫಲಾನುಭವಿಗಳಿಗೆ 6.10 ಕೋಟಿ ರೂ. ಮೌಲ್ಯದ ಸಾಮಗ್ರಿ ಪೂರೈಸಲಾಗಿದೆ.ಆದರೆ ಸರ್ಕಾರದಿಂದ ಬಿಡುಗಡೆಯಾದ ಒಟ್ಟು ಬಿಲ ಮೊತ್ತದಲ್ಲಿ ಈ ವೆಚ್ಚವನ್ನು ಹೊರತುಪಡಿಸಿ, ಅಂದಾಜು 23,35,42,032 ರೂ. ಹೆಚ್ಚುವರಿ ಮೊತ್ತವನ್ನು ಗುತ್ತಿಗೆದಾರರಿಗೆ ಅಕ್ರಮವಾಗಿ ಪಾವತಿಸಿ ಸರ್ಕಾರಕ್ಕೆ ನಷ್ಟ ಉಂಟುಮಾಡಲಾಗಿದೆ ಈ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತದ ಪೊಲೀಸ ಅಧೀಕ್ಷಕ ಪ್ರಸನ್ನ ದೇಸಾಯಿ ಪ್ರಕರಣ ದಾಖಲಿಸಿಕೊಂಡಿದ್ದು,ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಆರಕ್ಷಕ ನಿರೀಕ್ಷಕ ವೆಂಕಟೇಶ ಯಡಹಳ್ಳಿ ಮುಂದುವರಿಸಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.