ಅಡಹಳ್ಳಿ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿದರು. ಅಮರೇಶ್ವರ ಮಹಾರಾಜರು, ಶಿವು ಗುಡ್ಡಾಪುರ, ಘಟಿವಾಳಪ್ಪ ಗುಡ್ಡಾಪುರ, ಮಹಾದೇವ ಹಿಪ್ಪರಗಿ, ಪರಸಪ್ಪ ಅಥಣಿ ಇತರರಿದ್ದರು. 
ಬೆಳಗಾವಿ

ಸಮುದಾಯ ಭವನಕ್ಕೆ 25 ಲಕ್ಷ ರೂ.

ಅಥಣಿ ಗ್ರಾಮೀಣ: ಮನದಲ್ಲಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಆಂತರಿಕ ಕೊಳೆ ತಗೆಯಲು ಆಧ್ಯಾತ್ಮಿಕ ಚಿಂತನೆ ಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬೀರಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ 25 ಲಕ್ಷ ರೂ. ಮಂಜೂರಾಗಿದ್ದು. ಶೀಘ್ರ ಶಂಕುಸ್ಥಾಪನೆ ಮಾಡಲಾಗುವುದು. ಪ್ರವಚನ, ಸತ್ಸಂಗದಲ್ಲಿ ಪಾಲ್ಗೊಂಡಲ್ಲಿ ಮನಸ್ಸು ಪ್ರಶಾಂತವಾಗುತ್ತದೆ ಎಂದರು.
ಕವಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಮಾತನಾಡಿ, ಸಂಸ್ಕಾರವಂತ ಮನುಷ್ಯನಾಗಲು ಸದಾಕಾಲ ದೇವರ ಸ್ಮರಣೆ ಮಾಡಬೇಕು. ದುಶ್ಚಟಗಳಿಂದ ದೂರವಿರಬೇಕು. ಮಾನ ಅಪಮಾನ, ಹೊಗಳಿಕೆ-ತೆಗಳಿಕೆಗೆ ಗಮನಕೊಡದೆ ಗುರುವಿನ ಸ್ಮರಣೆ ಮಾಡಬೇಕು ಎಂದರು.
ತಾಪಂ ಮಾಜಿ ಸದಸ್ಯ ಶಿವು ಗುಡ್ಡಾಪುರ ಮಾತನಾಡಿ, ಶಾಸಕ ಲಕ್ಷ್ಮಣ ಸವದಿ ಕೇತ್ರದಲ್ಲಿ ಅಭಿವೃದ್ಧಿ ಕೆಲಸಕ್ಕೆ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.
ಪಿಕೆಪಿಎಸ್ ಅಧ್ಯಕ್ಷ ಘಟಿವಾಳಪ್ಪ ಗುಡ್ಡಾಪುರ, ಅಡಿವೆಪ್ಪ ಕೆಂಚಣ್ಣವರ, ಮಹಾದೇವ ಹಿಪ್ಪರಗಿ, ಸೂರ್ಯಕಾಂತ ಡಂಬಳಕರ, ಪರಸಪ್ಪ ಅಥಣಿ, ಈರಗೌಡ ಪಾಟೀಲ, ಸಿದರಾಯ ಕೋಹಳ್ಳಿ, ಎಸ್.ಎಸ್.ಹೂಟಿ, ಸದಾಶಿವ ವಡಗಾಲಿ, ಬೀರಪ್ಪ ಯಕ್ಕಂಚಿ, ರಾಮು ಹೊನವಾಡ, ಜ್ಯೋತೆಪ್ಪ ನಾಗಠಾಣ, ಭೀಮು ಕೇರಿ, ದುಂಡಪ್ಪ ಮಾಯನಟ್ಟಿ, ಮಾಳಪ್ಪ ಪೂಜಾರಿ, ಕಲ್ಮೇಶ ಗುಡಿಮನಿ ಇತರರಿದ್ದರು. ಪ್ರಕಾಶ ಪೂಜಾರಿ ಸ್ವಾಗತಿಸಿದರು. ಸುರೇಶ ಅಥಣಿ ನಿರೂಪಿಸಿದರು.